ಕ್ರಾಂತಿಯೋಗಿ ಬಾಬಾ ರಾಮದೇವ್

ಅದು ಕ್ರಾಂತಿಯ ಹೊಸ ರೂಪ. ಸಹಸ್ರ ಸಹಸ್ರ ಸಂಖ್ಯೆಯ ಜನರನ್ನು ಒಂದೇ ದಿಕ್ಕಿನೆಡೆಗೆ ಮುನ್ನಡೆಸಿ, ಜಾಗೃತಗೊಳಿಸುವ ಕ್ರಾಂತಿ ಅದು. ಬಾಬಾ ರಾಮ್ ದೇವ್, ಆ ಕ್ರಾಂತಿಯ ಹೆಸರು. ಬಾಬಾ ರಾಮ್ ದೇವ್, ಸವಾಲುಗಳನ್ನು ಕೆಚ್ಚೆದೆಯಿಂದ ಸ್ವೀಕರಿಸುವ ಸಂಕೇತ. ಬಾಬಾ ರಾಮ್ ದೇವ್, ತಾನು ನಂಬಿದ ಸತ್ಯವನ್ನು ದೃಢವಾಗಿ ಪ್ರತಿಪಾದಿಸಬಲ್ಲ ಶ್ರದ್ಧಾ ಮೂರ್ತಿ.  ದೇಶದ ಯಾವ ಭಾಗಕ್ಕೆ ನದೆದರೂ ಇಂದು ಬೆಳಗಿನ ವೇಳೆ ‘ಆಸ್ಥಾ’ ಚಾನೆಲ್ ನಲ್ಲಿ ಬಾಬಾ ರಾಮದೇವರನ್ನು ನೋಡುತ್ತ, ಅವರ ಮಾತು ಕೇಳುತ್ತ, ಯೋಗ ಮಾಡುವವರ ಸಂಖ್ಯೆ ಲೆಕ್ಕವಿಲ್ಲದಷ್ಟು!

Baba ji

ಇಂದು ಬಾಬಾ ರಾಮದೇವ್ ಎಂದು ಕರೆಸಿಕೊಳ್ಳುತ್ತಿರುವ ರಾಮಕೃಷ್ಣ ಯಾದವರು ಜನಿಸಿದ್ದು ಹರ್ಯಾಣದ ಮಹೇಂದ್ರ ಗಢ್ ಜಿಲ್ಲೆಯ ಅಲೀಪುರದಲ್ಲಿ. ಹಾಗೆ ನೋಡಿದರೆ, ಅಚ್ಚ ಕರೀಕೂದಲಿನ, ಬೆಳ್ಳಗೆ ಹೊಳೆಯುವ ಗಟ್ಟಿ ಹಲ್ಲಿನ, ಶಕ್ತಿ ಸಂಪನ್ನ ದೇಹ ಸೌಷ್ಟವದ ರಾಮದೇವರಿಗೆ ಹೆಚ್ಚುಕಡಿಮೆ ನಲವತ್ತೈದು ವರ್ಷ! ಹುಟ್ಟಿದ ಎರಡೂವರೆ ತಿಂಗಳಿಗೇ ಪಾರ್ಶ್ವ ವಾಯುವಿಗೆ ತುತ್ತಾಗಿ ಅವರ ದೇಹದ ಅರ್ಧ ಭಾಗ ಜರ್ಝರಿತವಾಗಿತ್ತು. ದೈವ ಕೃಪೆಯಿಂದ ಅಂದು ಸಾವಿನಿಂದ ಪಾರಾದರೂ ಮುಂದೆ ಮತ್ತೆ ಏಳು ಬಾರಿ ಸಾವಿನ ಮನೆ ಹೊಕ್ಕು ಮರಳಿಬಂದರು. ಹೀಗಾಗಿ ಲೌಕಿಕ ಓದಿಗಿಂತ ಅಂತರ್ಮುಖಿಯಾಗುವ ಚಿಂತನೆ ಅವರಿಗೆ ಬಹುಬೇ ಗ ಒಗ್ಗಿಕೊಂಡಿತು. ಎಂಟನೇ ತರಗತಿಯ ವರೆಗೆ ಅಧ್ಯಯನ ನಡೆಸಿದ ರಾಮಕೃಷ್ಣ ಯಾದವ್, ಆನಂತರ ಸೇರಿದ್ದು ಗುರುಕುಲಕ್ಕೆ. ಅಲ್ಲಿ ಸಂಸ್ಕೃತ ಮತ್ತು ಯೋಗದ ಅಭ್ಯಾಸ ನಡೆಸಿದರು. ಆನಂತರ ಸಂನ್ಯಾಸ ಸ್ವೀಕರಿಸಿ, ರಾಮದೇವ್ ಬಾಬಾ ಆದರು. ಅಲ್ಲಿಂದ ಜಿಂದ್ ಜಿಲ್ಲೆಯತ್ತ ಪ್ರಯಾಣ ಬೆಳೆಸಿ, ಹರ್ಯಾಣದ ಕಾಲ್ವಾ ಗುರುಕುಲದಲ್ಲಿ ಹಳ್ಳಿಯ ಜನರಿಗೆ ಯೋಗ ತರಬೇತಿ ಶುರುಮಾಡಿದರು.
ಅಲ್ಲಿಂದಾಚೆಗೆ ಸತತ ಪರಿಶ್ರಮ ಮತ್ತು ಅಧ್ಯಯನಗಳಿಂದ ಯೋಗ ಕ್ಷೇತ್ರದಲ್ಲಿ ವಿಶೇಷ ಹಿಡಿತ ಸಾಧಿಸಿದ ಬಾಬಾ ಸಾಗಿದ ದಿಕ್ಕು ಅಭೂತಪೂರ್ವ.
೧೯೯೫ರಲ್ಲಿ ಅವರು ಆಚಾರ್ಯ ಕರ್ಮವೀರ ಮತ್ತು ಆಚಾರ್ಯ ಬಾಲಕೃಷ್ಣರೊಂದಿಗೆ ಸೇರಿ ಕೃಷ್ಣ ಗಢ್, ಮಹೇಂದ್ರ ಗಢ್, ಮತ್ತು ಘಶೇರಾಗಳಲ್ಲಿ ಗುರುಕುಲಗಳನ್ನು ಸ್ಥಾಪಿಸಿದರು. ಆಗ ಅವರಿಗೆ ಬರಿಯ ಮೂವತ್ತು ವರ್ಷ!
ಈ ಗುರುಕುಲವೂ ಸೇರಿದಂತೆ ಯೋಗ ಪ್ರಚಾರವನ್ನು ಮತ್ತಷ್ಟು ವ್ಯಾಪಕಗೊಳಿಸುವ ಚಿಂತನೆಯೊಂದಿಗೆ ರಾಮದೇವರು ‘ದಿವ್ಯ ಯೋಗ ಮಂದಿರ ಟ್ರಸ್ಟ್’ ಸ್ಥಾಪಿಸಿ, ಅದರ ಅಧ್ಯಕ್ಷರೂ ಆದರು. ಆಗಲೇ ಅವರ ಯೋಗ ಶಿಬಿರಗಳು ವಿಶ್ವದ್ಯಂತ ನಡೆಯಲು ಶುರುವಾಗಿದ್ದು. ಆ ಶಿಬಿರಗಳಲ್ಲಿ ಸಾರ್ವಜನಿಕವಾಗಿ ಯೋಗ ತರಬೇತಿ ನೀಡುತ್ತಿದ್ದ ಬಾಬಾ, ಇತರ ಚಿಕಿತ್ಸೆಗಳಿಂದ ಗುಣಪಡಿಸಲಾಗದ ಹಲವಾರು ರೋಗಗಳನ್ನು ಯೋಗದಿಂದ ಗುಣಪಡಿಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸುತ್ತ, ಅದನ್ನು ಎಲ್ಲೆಡೆ ಪ್ರಚುರಪಡಿಸಲಾರಂಭಿಸಿದರು. ಅವರ ಯೋಗ ಶಿಬಿರಕ್ಕೆ ಬರುತ್ತಿದ್ದವರ ಸಂಖ್ಯೆ ನೂರರಿಂದ ಸಾವಿರಕ್ಕೇರಿತು. ಈಗಂತೂ ಪ್ರತಿದಿನ ಸುಮಾರು ಇಪ್ಪತ್ತು ಸಾವಿರದಷ್ಟು ಜನ ಶಿಬಿರಗಳಲ್ಲಿ ಭಗವಹಿಸಿ ಬಾಬಾರೊಂದಿಗೇ ಯೋಗ ಸಾಧನೆ ಮಾಡುತ್ತಿರುವುದೊಂದು ವೈಶಿಷ್ಟ್ಯ.
ಇದರೊಂದಿಗೇ ಬಾಬಾ ರಾಮದೇವ್ ರಾಷ್ಟ್ರಪತಿ ಭವನದಲ್ಲಿ ಯೋಗ ಶಿಬಿರ ನಡೆಸಿ ಅನೇಕರ ಹುಬ್ಬು ಮೇಲೇರುವಂತೆ ಮಾಡಿದರು. ಲಂಡನ್ನಿನ ಹೌಸ್ ಆಫ್ ಕಾಮನ್ಸ್(ಅಲ್ಲಿನ ಸಂಸತ್ತು)ನಲ್ಲಿ ಯೋಗ ಶಿಬಿರ ನಡೆಸಿದ್ದಂತೂ ಜಾಗತಿಕ ಮಟ್ಟದಲ್ಲಿ ಅವರಿಗೆ ಸಿಕ್ಕ ಬಹುದೊಡ್ಡ ಮನ್ನಣೆ ಎನ್ನಬಹುದು.
ಯೋಗ ಅನ್ನುವುದು ಸಣ್ಣಸಣ್ಣ ಕೇಂದ್ರಗಳಿಗೆ ಸೀಮಿತವಾಗಿದ್ದ ಕಾಲಕ್ಕೆ ಅದರ ಹಂದರವನ್ನು ವಿಶಾಲಗೊಳಿಸಿ, ಪ್ರತಿಯೊಬ್ಬರೂ ಯೋಗ- ಪ್ರಾಣಾಯಾಮದ ನಿತ್ಯ ಅಭ್ಯಾಸದಲ್ಲಿ ತೊಡಗುವಂತೆ ಪ್ರೇರೇಪಿಸಿದ ಕೀರ್ತಿ ಬಾಬಾ ರಾಮದೇವರಿಗೇ ಸಲ್ಲಬೇಕು. ಆಸ್ಥಾ ವಾಹಿನಿ ಅವರ ಯೋಗ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಆರಂಭಿಸಿದಮೇಲಂತೂ ಶಿಬಿರಗಳಲ್ಲಿ ಪಾಲ್ಗೊಳ್ಳುವವರಷ್ಟೆ ಅಲ್ಲದೆ, ಟೀವಿ ನೋಡುತ್ತ, ಅವರನ್ನು ಅನುಸರಿಸುವವರ ಸಂಖ್ಯೆಯೂ ಬೆಳೆಯುತ್ತ ಸಾಗಿತು. ಈಗಂತೂ ಆಸ್ಥಾ ವಾಹಿನಿಯು ಆಫ್ರಿಕಾ, ಆಸ್ಟ್ರೇಲಿಯಾ, ಏಶಿಯಾದ ಬಹುತೇಕ ಎಲ್ಲ ರಾಷ್ಟ್ರಗಳು, ಯುರೋಪು ಮತ್ತು ಅಮೇರಿಕಾ- ಈ ಎಲ್ಲ ಕಡೆಗಳಲ್ಲೂ ರಾಮದೇವರ ಯೋಗ ಕಾರ್ಯಕ್ರಮಗಳನ್ನು ಬಿತ್ತರಗೊಳಿಸುತ್ತಿದೆ. ಮುಂಜಾನೆ ಐದರಿಂದ ಏಳೂವರೆಯವರೆಗೆ ಅವರ ಯೋಗ ಪಾಠದ ನೇರ ಪ್ರಸಾರವಿರುತ್ತದೆ. ಅದಕ್ಕಿರುವ ಜನಮನ್ನಣೆ ಕುರಿತಂತೆ ಆಸ್ಥಾ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಜೊತೆಗೆ, ಈ ಕಾರ್ಯಕ್ರಮಕ್ಕೆ ವಿಶ್ವಾದ್ಯಂತ ಸುಮಾರು ಎರಡು ಕೋಟಿ ವೀಕ್ಷಕರಿದ್ದಾರೆ ಎನ್ನುವ ಅಂಕಿಅಂಶವನ್ನೂ ಬಿಚ್ಚಿಡುತ್ತದೆ.
ನೀವು ನಂಬಲಾರಿರಿ. ಟಿವಿಯಲ್ಲಿ ಕಾರ್ಯಕ್ರಮ ನೋಡುತ್ತ, ರಾಮದೇವರ ಯೋಗ ಪಾಠಕ್ಕೆ ಶಿಷ್ಯರಾದವರು ತಾವು ರಕ್ತದೊತ್ತಡ, ಬೊಜ್ಜು, ಸಕ್ಕರೆ ಖಾಯಿಲೆ, ಹೆಪಟೈಟಿಸ್ ಇತ್ಯಾದಿ ರೋಗಗಳಿಂದ ಮುಕ್ತರಾಗಿರುವ ಬಗ್ಗೆ ದೃಢ ಧ್ವನಿಯಲ್ಲಿ ಹೇಳಿಕೊಳ್ಳುತ್ತಾರೆ. ಅಂದಮೇಲೆ, ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಯೆಂಬುದನ್ನು ಒಪ್ಪಲೇಬೇಕು ತಾನೆ?
ಇತರರ ಯೋಗ ತರಗತಿಗಳಿಗೂ ರಾಮದೇವರ ಯೋಗ ತರಗತಿಗೂ ವ್ಯತ್ಯಾಸವೇನು? ಅವರೇಕೆ ಇಷ್ಟೊಂದು ಜನಪ್ರಿಯರು? ಈ ಪ್ರಶ್ನೆಗಳು ಸಹಜ. ರಾಮದೇವ್ ಬಾಬಾ, ಇತರರಂತೆ ಆಸನಗಳಿಗೇ ಹೆಚ್ಚು ಒತ್ತು ಕೊಟ್ಟು ಕೂರುವವರಲ್ಲ. ಅವರ ಯೋಗವೆಂದರೆ, ಬಹುತೇಕ ಪ್ರಾಣಾಯಾಮವೇ. ಉಸಿರಿನ ಮೇಲೆ ಹಿಡಿತ ಸಾಧಿಸುವುದರಿಂದ ದೇಹದ ಮೇಲೆ ಸುಲಭವಾಗಿ ಹಿಡಿತ ಸಾಧಿಸಬಹುದೆಂಬುದನ್ನು ಅವರು ಅನೇಕ ನಿದರ್ಶನಗಳ ಮೂಲಕ ಸಿದ್ಧಪಡಿಸಿದ್ದಾರೆ.  ಹೀಗಾಗಿಯೇ “ಭಾರತದಲ್ಲಿ ಯೋಗದ ಪುನರುತ್ಥಾನಕ್ಕೆ ಕಾರಣರಾದ ಒಬ್ಬ ವ್ಯಕ್ತಿಯನ್ನು ಹೆಸರಿಸಬೆಕೆಂದರೆ, ಅದು ನಿಸ್ಸಂಶಯವಾಗಿ ಬಾಬಾ ರಾಮದೇವರೇ. ಯೋಗದಿಂದ ಮಾರಕ ರೋಗಗಳನ್ನು ಗುಣಪಡಿಸಬಹುದೆಂದು ಅವರು ಮೇಲಿಂದಮೇಲೆ ನಿರೂಪಿಸುತ್ತ ಬಂದಿದ್ದಾರೆ. ಸ್ವಾಮಿ ರಾಮದೇವರು ಯೋಗವನ್ನು ಪ್ರಚುರಪಡಿಸುತ್ತಿರುವ ರೀತಿ ಹೇಗಿದೆಯೆಂದರೆ, ಆದಷ್ಟು ಬೇಗ ಪ್ರತಿಯೊಬ್ಬರಿಗೂ ಅದರ ಅರಿವು ಮೂಡಿ ಯೋಗವನ್ನು ಅಪ್ಪಿಕೊಳ್ಳುವ ದಿನ ದೂರವಿಲ್ಲ” ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಉದ್ಗಾರವೆತ್ತಿದ್ದು!
ಬಾಬಾ ರಾಮದೇವರದೊಂದು ಭವ್ಯ ಕನಸಿದೆ. ಅದು, ಪತಂಜಲಿ ಯೋಗ ಕೇಂದ್ರದ್ದು. ಸುಮಾರು ನೂರುಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಗ ಪೀಠ ಹರಿದ್ವಾರದಿಂದ ೨೦ ಕಿ.ಮೀ ದೂರದಲ್ಲಿ ಬಹದ್ರಾಬಾದಿನಲ್ಲಿ ನಿರ್ಮಾಣವಾಗಲಿದೆ. ಯೋಗ, ಆಯುರ್ವೇದಗಳನ್ನು ತುತ್ತತುದಿಗೊಯ್ದು ನಿಲ್ಲಿಸಿ, ಇಡಿ ಜಗತ್ತಿಗೆ ಅದರ್ ಬೆಳಕು ಹರಿಯುವಂತೆ ಮಾಡುವ ಇರಾದೆ ಬಾಬಾರದ್ದು.
೨೦೦೬ರ ಆಗಸ್ಟ್ ೬ರಂದು ಈ ಯೋಜನೆಗೆ ಚಾಲನೆ ದೊರಕಿದೆ. ಬರಲಿರುವ ೨೦೦೯ರ ವೇಳೆಗೆ ಜಗತ್ತಿನ ಕಣ್ ಕುಕ್ಕುವ ಈ ಅದ್ಭುತ ಯೋಜನೆಯು ಲೋಕಾರ್ಪಣಗೊಳ್ಳಲಿದೆ. ಈ ಕೇಂಡ್ರದಲ್ಲಿ ಸಾವಿರ ರೋಗಿಗಳನ್ನು ಒಮ್ಮೆಗೇ ಗುಣಪಡಿಸಬಹುದಲ್ಲದೆ, ಐದು ಸಾವಿರ ಮಂದಿ ಒಟ್ಟಿಗೆ ಯೋಗ ನಿರತರಾಗಬಹುದಾದಷ್ಟು ಸ್ಥಳವಕಾಸವೂ ಇರಲಿದೆ. ದಿನವೊಂದಕ್ಕೆ ಒಟ್ಟಾರೆಯಾಗಿ ಐದು ಸಾವಿರ ರೋಗಿಗಳ ತಪಾಸಣೆ ಮಾಡಬಲ್ಲ ಜಗತ್ತಿನ ಅತಿ ದೊಡ್ಡ ಚಿಕಿತ್ಸಾಲಯವೂ ಇದಾಗಲಿದೆ.
ಸ್ವಾಮಿ ರಾಮದೇವರ ಈ ಯೋಗ ಯಾತ್ರೆಯನ್ನು ಮೆಚ್ಚಿಯೇ ಒರಿಸ್ಸಾದ ಕಳಿಂಗ ಇನ್ಸ್ಟಿಟ್ಯೂಟ್  ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ, ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು. ಈ ಕರ್ಯಕ್ರಮದಲ್ಲಿ ಭಾಗವಹಿಸಿದ್ದ ನೊಬೆಲ್ ಪುರಸ್ಕೃತ ರಸಾಯನ ಶಾಸ್ತ್ರ ವಿಜ್ಞಾನಿ ರಿಚರ್ಡ್ ಅರ್ನೆಸ್ಟ್, ಯೋಗ ಪದ್ಧತಿಯನ್ನೂ ಬಾಬಾರನ್ನೂ ಭಾವ ಪೂರ್ಣವಾಗಿ ಕೊಂಡಾಡಿದ್ದರು.
ಬಾಬಾ ರಾಮದೇವರ ಸಾಧನೆಯ ಹಾದಿ ಹೂವಿನಿಂದಲೇ ಕೂಡಿದ್ದು ಎಂದೇನೂ ಭಾವಿಸಬೇಡಿ. ಯೋಗದ ವ್ಯಾಪಕ ಪ್ರಚಾರದಿಂದ ಹಿಂದುತ್ವದ – ಭಾರತೀಯತೆಯ ಪ್ರಚಾರವಾಗುತ್ತದೆಂದು ಕರುಬಿದ ಕಮ್ಯುನಿಸ್ಟ್ ಪಕ್ಷ ಅವರ ಮೇಲೆ ತಮ್ಮೆಲ್ಲ ಕುಯುಕ್ತಿಗಳನ್ನೂ ಪ್ರಯೋಗಿಸಿ ಗೋಳುಹೊಯ್ದುಕೊಂಡಿತು. ೨೦೦೫ರಲ್ಲಿ ೧೧೩ ಮಂದಿ ದಿವ್ಯ ಯೋಗ ಮಂದಿರದ ಉದ್ಯೋಗಿಗಳು ಪಕ್ಷದೊಂದಿಗೆ ಕೈ ಜೋಡಿಸಿ ಬಾಬಾ ವಿರುದ್ಧ ಸಮರ ಸಾರಿದರು. ಧೃತಿಗೆಡದ ರಾಮದೇವರು, ಜಿಲ್ಲಾಡಳಿತ, ಉದ್ಯೋಗಿಗಳು, ಮತ್ತು ಟ್ರಸ್ಟ್ ನ ಆಡಳಿತ ಮಂಡಳಿಯೊಂದಿಗೆ ಸೇರಿ ಒಪ್ಪಂದ ಮಾಡಿಕೊಂಡರು. ಆನಂತರ, ಉದ್ಯೋಗಿಗಳ ನಡುವೆಯಿದ್ದುಕೊಂಡು ಗಲಭೆ ಹುಟ್ಟುಹಾಕುತ್ತಿದ್ದವರನ್ನು ಗೂಂಡಾಗಿರಿಯ ಆರೋಪ ಹೊರೆಸಿ ಕೆಲಸದಿಂದು ಕಿತ್ತುಹಾಕಿದರು. ಬಾಲ ಸುಟ್ಟಂತಾದ ಪಕ್ಷ ಮತ್ತು ಅದರ ಬೆಂಬಲಿಗರು ಟ್ರೇಡ್ ಯೂನಿಯನ್ ಮೂಲಕ ಕೋರ್ಟ್ ಮೆಟ್ಟಿಲೇರಿತು. ಬಾಬಾ ಜಗ್ಗಲಿಲ್ಲ.
ಕಮ್ಯುನಿಸ್ಟ್ ಪಕ್ಷದ ನಾಯಕಿ ಬೃಂದಾ ಕಾರಟ್ ದೆಹಲಿಯಲ್ಲಿ ಪತ್ರಕರ್ತರ ಸಭೆ ಕರೆದು, ಬಾಬಾ ರಾಮದೇವರ ಕಾರ್ಖಾನೆಯಲ್ಲಿ ತಯಾರಿಸಲಾಗುವ ಕೆಲವು ಔಷಧಗಳಿಗೆ ಪ್ರಾಣಿಗಳ ಮತ್ತು ಮಾನವರ ಮೂಳೆ ಪುಡಿಯನ್ನು ಬೆರೆಸಲಾಗುತ್ತಿದೆ ಎಂದು ಆರೋಪಿಸಿದರು. ಅಷ್ಟಕ್ಕೆ ಸುಮ್ಮನಾಗದೆ, ಮುಂದಿನ ಕೆಲವು ದಿನಗಳಲ್ಲಿ, ರಾಮದೇವರ ಸಂಸ್ಥೆಯಿಂದ ತಯಾರಾದ ಔಷಧಗಳನ್ನು ಔಷಧಿ ಅಂಗಡಿಗಳಿಂದ ಸಂಗ್ರಹಿಸಿ ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆಯೆಂದೂ ಅವುಗಳಲ್ಲಿ ಮೂಳೆಪುಡಿ ಬೆರೆತಿರುವುದು ಸಾಬೀತಾಗಿದೆಯೆಂದೂ ಮತ್ತೊಮ್ಮೆ ಕಾರಿಕೊಂಡರು.
ಬಾಬಾ ಸುಮ್ಮನೆ ಕೂರಲಿಲ್ಲ. ತಾವೂ ಅದೇ ಔಷಧಾಲಯಗಳಿಂದ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರು. ಅಲ್ಲಿ ಅವು ಶುದ್ಧ ಆಯುರ್ವೇದೀಯ ಮತ್ತು ಸಸ್ಯಾಹಾರಿ ಔಷಧಗಳು ಎಂದು ದೃಢವಾಯಿತು. ಬಾಬಾ, ಸುಳ್ಳು ಆರೋಪ ಮಾಡಿದ್ದನ್ನು ಪ್ರಶ್ನಿಸಿ ಬ್ರುಂದಾರನ್ನು ತರಾಟೆಗೆ ತೆಗೆದುಕೊಂಡರು. ಇದು ಯಾವ ಮಟ್ಟಕ್ಕೇರಿತೆಂದರೆ, ಮೊದಲ ಬಾರಿಗೆ ಅವರ ವಿರುದ್ಧ ವ್ಯಾಪಕ ಜನಾಭಿಪ್ರಾಯ ರೂಪಿಸುವುದು ಸಾಧ್ಯವಾಯಿತು. ಆಕೆಯಂತೂ ಇನ್ನೆಂದಿಗೂ ತಾನು ಇಂತಹ ಸಂಗತಿಗಳಲ್ಲಿ ಸಿಕ್ಕಿಬೀಳಲಾರೆ ಎಂದು ಸರ್ವಜನಿಕವಾಗಿ ಹೇಳಿಕೆ ಕೊಡಬೇಕಾಯ್ತು!
ಆದರೇನು? ಬಾಬಾ ರಾಮದೇವರ ಮೇಲೆ ಈ ರೀತಿಯ ರಾಜಕೀಯ ಪ್ರೇರಿತ, ದುರುದ್ದೇಶ ಪೀಡಿತ ಆಕ್ರಮಣಗಳಾದಂತೆಲ್ಲ ಅವರ ಬಳಿ ಸಾರುವ ಜನರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಯೋಗ ಪದ್ಧತಿಯನ್ನು ಅಳವಡಿಸಿಕೊಂಡು, ಶಾಖಾಹಾರ, ಆಯುರ್ವೇದ ಚಿಕಿತ್ಸೆ ಇತ್ಯಾದಿ ಋಜು ಮಾರ್ಗಗಳನ್ನು ಅನುಸರಿಸುವವರು ಹೆಚ್ಚುತ್ತಲೇ ಇದ್ದಾರೆ.
ಇರಲಿ. ಯೋಗ, ಪ್ರಾಣಯಾಮ, ಮನೆ ಮದ್ದು (ಹೋಮ್ ರೆಮಿಡಿ), ಯೋಗ ಮತ್ತು ಆರೋಗ್ಯ ವಿಜ್ಞಾನ ಎಂಬ ನಾಲ್ಕು ಪುಸ್ತಕಗಳನ್ನು ಬರೆದಿರುವ ರಾಮದೇವ್ ಬಾಬಾ, ತಮ್ಮ ಟ್ರಸ್ಟ್ ವತಿಯಿಂದ ಮಾಸಿಕ ಪತ್ರಿಕೆಯನ್ನೂ ಹೊರತರುತ್ತಿದ್ದಾರೆ. ಯೋಗ ಪ್ರದರ್ಶನ- ಪಾಠಗಳ ೪೪ ಸಿ.ಡಿ.ಗಳನ್ನೂ ಮಾರುಕಟ್ಟೆಯಲ್ಲಿರಿಸಿದ್ದಾರೆ.
ತಮ್ಮ ಸಾಮರ್ಥ್ಯದ ಮೇಲಿನ ವಿಶ್ವಾಸದಿಂದಲೇ ‘ರೋಗ ಮುಕ್ತ ಭಾರತ ಮತ್ತು ವಿಶ್ವ’ದ ಕನಸು ಕಾಣುತ್ತಿರುವ ಬಾಬಾ, ಯೋಗದಿಂದಲೇ ಆರ್ಯಾವರ್ತ ದೇಶ (ಭಾರತ) ಮತ್ತೆ ಜಗದ್ಗುರುವಿನ ಪಟ್ಟವೇರಲಿದೆ ಎಂದು ಅಸೀಮ ವಿಶ್ವಾಸದಿಂದ ನುಡಿಯುತ್ತಾರೆ.
ಅವರೊಂದಿಗೆ ನಾವು ಕೈ ಜೋಡಿಸಬೇಕಿದೆ, ಅಷ್ಟೇ!

2 thoughts on “ಕ್ರಾಂತಿಯೋಗಿ ಬಾಬಾ ರಾಮದೇವ್

  1. ಚಕ್ರವರ್ತಿ ಅವರೇ,
    ತಮ್ಮ ನೆಹರೂ ಪರದೆ ಸರಿಯಿತು ಮತ್ತು ಸಾವರ್ಕರ್ ಪುಸ್ತಕಗಳನ್ನೋದಿರುವೆ. ಹಲವಾರು ಕಡೆ ಉಪನ್ಯಾಸ ಮಾಡುತ್ತಿರುತ್ತೀರೆಂಬುದನ್ನು ಬಲ್ಲೆ. ನೀವು ನಿಮ್ಮ ಕಾರ್ಯಕ್ರಮ ಪಟ್ಟಿಯನ್ನು ಬ್ಲಾಗಿನಲ್ಲಿ ಹಾಕಿದರೆ ಅನುಕೂಲ. ಮೈಸೂರು, ಶಿವಮೊಗ್ಗ, ಬೆಳಗಾವಿಗಳಲ್ಲೆಲ್ಲ ನಿಮ್ಮ ಅಭಿಮಾನಿಗಳಾದ ನನ್ನ ಗೆಳೆಯ/ ಗೆಳತಿಯರಿದ್ದಾರೆ. ನನ್ನೂರು ಹಾಸನದಲ್ಲಿ ನಮ್ಮ ಮನೆಯವರೆಲ್ಲ ನಿಮ್ಮ ಟೀವಿ ಕಾರ್ಯಕ್ರಮಗಳನ್ನು ತಪ್ಪದೆ ವೀಕ್ಷಿಸುತ್ತಾರೆ. ನಾನು ಬೆಂಗಳೂರಿನಲ್ಲಿರುತ್ತೆನೆ.
    ದಯವಿಟ್ಟು ನಿಮ್ಮ ಕಾರ್ಯಕ್ರಮಗಳನ್ನು ಪ್ರಕಟಿಸಿ.

    ಬಾಬಾ ರಾಮದೇವರ ಕುರಿತ ವದಂತಿಗಳನ್ನು ಕೇಳಿದ್ದೆ. ಅವರ ಸಾಧನೆ ತಿಳಿದಿರಲಿಲ್ಲ. ನಿಮ್ಮ ಲೇಖನ ಸಾಕಷ್ಟು ಮಾಹಿತಿಯೊದಗಿಸಿದೆ. ಥ್ಯಾಂಕ್ಸ್.

    – ವೀಣಾ ಗೌಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s