ರಾಮಕೃಷ್ಣಾಶ್ರಮದಲ್ಲಿ ಪುಸ್ತಕ (ಪ್ರ)ದರ್ಶನ

ಸ್ವಾಮಿ ವಿವೇಕಾನಂದ! ಅದು ಬರಿಯ ಹೆಸರಲ್ಲ. ಅದೊಂದು ಶಕ್ತಿ. ಅಸೀಮ ಸ್ಫೂರ್ತಿ. ಅವರನ್ನು ಆಲಿಸುತ್ತ, ಅವರು ನಡೆದು ತೋರಿದ ದಾರಿಯಲ್ಲಿ ಹೆಜ್ಜೆಗಳನ್ನಿಡುತ್ತ ನಡೆದು ಬದುಕಿನ ಉನ್ನತ ಮಜಲುಗಳಿಗೇರಿದ ಯುವಕರ ಸಂಖ್ಯೆ ಅದೆಷ್ಟೋ… ಅದು ರಾಷ್ಟ್ರ ಪ್ರೇಮದ ಮಾತಾಗಿರಲಿ, ಸಮಾಜ ಸೇವಾ ಕ್ಷೇತ್ರವಿರಲಿ, ಅಥವಾ ಸಾಹಿತ್ಯ ಕ್ಷೇತ್ರವೇ ಆಗಿರಲಿ… ಎಲ್ಲೆಲ್ಲೂ ಹೊಸ ಹುಮ್ಮಸ್ಸಿನ ಅಲೆ ಎಬ್ಬಿಸುತ್ತ ಉತ್ಕೃಷ್ಟತೆಯ ಪತಾಕೆ ಹಾರಿಸುತ್ತ ಮೆರೆಯುವ ಏಕೈಕ ಹೆಸರು, ಸ್ವಾಮಿ ವಿವೇಕಾನಂದ.
ನಾವು ಮಾಡುವ ಯಾವುದೇ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ವಿವೇಕಾನಂದರ ಮಾತುಗಳು ಸಮರ್ಥ ಮಾರ್ಗದರ್ಶನ ನೀಡಬಲ್ಲವು. ಅವರಲ್ಲಿ ನಿರಾಶಾವಾದದ ಋಣಾತ್ಮಕ ಅಂಶವೇ ಇಲ್ಲ. ಎಂಥ ಪರಿಸ್ಥಿತಿಯಲ್ಲಿಯೂ ಸ್ವಾಮೀಜಿಯವರ ಮಾತು ಕೇಳಿದವನು ಚೈತನ್ಯದ ಚಿಲುಮೆಯಾಗಿಬಿಡುತ್ತಾನೆ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಸೋದರಿ ನಿವೇದಿತಾ, ನೇತಾಜಿ, ಅರವಿಂದರು, ಭಾಗಾ ಜತೀನ್, ಹೀಗೆ ಸಾಲು ಸಾಲು ಕ್ರಾಂತಿವೀರರು ವಿವೇಕಾನಂದರ ಪ್ರಖರ ತೇಜಸ್ಸಿನ ಸುಳಿಮಿಂಚಿಗೆ ಸಿಲುಕಿ ತಾವೂ ಧೃವತಾರೆಗಳಾದರು. ನಮ್ಮ ಕನ್ನಡದ ಕುವೆಂಪು ಅಂಥವರು ಸ್ವಾಮೀಜಿ ಚಿಂತನೆಗಳಿಂದ ಬಹಳ ಪ್ರಭಾವಿತರಾಗಿದ್ದರು. ಅವರ ಶಿಷ್ಯರಾದ ಜಿ. ಎಸ್. ಶಿವರುದ್ರಪ್ಪನವರೂ ಕೂಡ ವಿವೇಕಾನಂದರ ಮಾತುಗಳಿಂದ ಪ್ರಭಾವಿತರಾದವರೇ. ಇವರು ನಮ್ಮ ಕಣ್ಣಿಗೆ ಕಾಣುವ ಕನ್ನಡಿಗರಷ್ಟೇ. ಇನ್ನು ಇತರ ರಾಜ್ಯಗಳಲ್ಲಿ ಹೀಗೆ ಸ್ವಾಮೀಜಿ ವಿಚಾರ ಧಾರೆಗಳಿಂದ ಪ್ರಭಾವಿತರಾದ ಸಾಹಿತಿಗಳು ಅದೆಷ್ಟಿರುವರೋ?  
ಸಮಾಜ ಸೇವೆಯ ಕ್ಷೇತ್ರಕ್ಕೆ ಬಂದರೆ, ಸೋಲಿಗರ ನಡುವೆ ಕೆಲಸ ಮಾಡುವ, ಅವರಲ್ಲಿ ಬದುಕಿನ ವಿಶ್ವಾಸ ತುಂಬುತ್ತಿರುವ ಸುದರ್ಶನರು, ಹೆಗ್ಗಡೆದೇವನ ಕೋಟೆಯ ಬಾಲಸುಬ್ರಹ್ಮಣ್ಯರು, ಇವರೆಲ್ಲರ ಶಕ್ತಿಸ್ರೋತ ಸ್ವಾಮಿ ವಿವೇಕಾನಂದರೇ! ಇವರೂ ಕೂಡ ನಮ್ಮ ಸ್ಮರಣೆಗೆ ಥಟ್ಟನೆ ಬರುವ ವ್ಯಕ್ತಿಗಳು. ಇವರಂತೆ ಎಲೆ ಮರೆಯ ಕಾಯಿಗಳಾಗಿ ಸಮಾಜ ಸೇವೆಗೆ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಕಟಿ ಬದ್ಧರಾಗಿರುವವರು ಬಹಳ  ಷ್ಟಿದ್ದಾರೆ. ಇಂದಿನ ಯುವಶಕ್ತಿ ದಾರಿತಪ್ಪಿದೆ ಎಂದೆಲ್ಲ ಹೇಳು   ತ್ತೇವೆ, ಹೀಗೆ ಮಾರ್ಗಬಿಟ್ಟ ಯುವಕರನ್ನು ಮತ್ತೆ ಸರಿದಾರಿಗೆ ತರಲು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚುವುದು ಬಿಟ್ಟು ಬೇರೆ ಮಾರ್ಗವಿಲ್ಲ.
 ದೇಶಾದ್ಯಂತ ಇರುವ ರಾಮಕೃಷ್ಣಾಶ್ರಮಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಅವುಗಳಲ್ಲಿ ನಮ್ಮ ಬೆಂಗಳೂರಿನ ಆಶ್ರಮವೂ ಮುಖ್ಯವಾದುದು. “ಸುಮ್ಮನೆ ನೋಡಲೆಂದು” ಬಂದ ಅದೆಷ್ಟೋ ಯುವಕರು ಇಲ್ಲಿನ ಪ್ರಶಾಂತ ವಾತಾವರಣದ ಪ್ರಭಾವಲಯಕ್ಕೆ ಒಳಗಾಗಿ ಆಂತರಿಕ ಪರಿವರ್ತನೆ ಪಡೆದು ಹೊರನಡೆದಿದ್ದಿದೆ. ಆಶ್ರಮ ನಡೆಸುತ್ತಿರುವ ವಿದ್ಯಾರ್ಥಿಗಳ ಹಾಸ್ಟೆಲ್- ವಿದ್ಯಾರ್ಥಿ ಮಂದಿರವಂತೂ ಸಾವಿರ ಸಾವಿರ ಸಂಖ್ಯೆಯ ಯುವಕರಿಗೆ ಆದರ್ಶದ ಪಥ ರೂಪಿಸಿಕೊಟ್ಟಿದೆ, ಬದುಕಿಗೊಂದು ಧ್ಯೇಯ ಕಲ್ಪಿಸಿಕೊಟ್ಟಿದೆ. ಇದೆಲ್ಲ, ಆಶ್ರಮದ ಪೂಜಾವೇದಿಯಲ್ಲಿ ಅಪಾರ ಕರುಣೆ ಹರಿಸುತ್ತ, ತಣ್ಣಗೆ ನಗುತ್ತ ಕುಳಿತಿರುವ ಪರಮಹಂಸರ ಕರುಣೆ. ಬಂದ ಮಕ್ಕಳಿಗೆಲ್ಲ ಇಲ್ಲಿ ತಾಯಿ ಮಡಿಲಿನಲ್ಲಿರುವಂಥ ಸುರಕ್ಷತೆಯ ಭಾವ. ಜನನಿ ಶಾರದಾಮಾತೆ ಹರಸಿದ ಸ್ಥಳವಲ್ಲವೇ ಇದು? ಇಲ್ಲಿ ಈ ಬಗೆಯ ಹತ್ತು ಹಲವು ವೈಶಿಷ್ಟ್ಯಗಳು.
ಶತಮಾನದ ಇತಿಹಾಸ ಕಂಡ ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮ ಸರಿಯುತ್ತಿರುವ ಕಾಲಕ್ಕೆ ಅಗತ್ಯವಿರುವಂತಹ ಕಾರ್ಯಕ್ರಮಗಳನ್ನು ರೂಪಿಸುತ್ತ, ಯುವ ಶಕ್ತಿ ಧನಾತ್ಮಕ ದಿಕ್ಕಿನಲ್ಲಿ ಹರಿಯುವಂತೆ ಮಾರ್ಗದರ್ಶನ ಮಾಡುತ್ತ, ಸ್ವಾಮೀಜಿಯವರ ಆಶಯವನ್ನು ಸಾಕಾರಗೊಳಿಸುತ್ತಿದೆ. ಭವ್ಯ ಭಾರತದ ನಿರ್ಮಾಣ ಕೇವಲ ಕನಸಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಇಂದಿನ ಪೀಳಿಗೆ ಬೌದ್ಧಿಕ ಚರ್ಚೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂಥದ್ದು.
ಬಸವನಗುಡಿಯಲ್ಲಿರುವ ರಾಮಕೃಷ್ಣಾಶ್ರಮ ಕಳೆದ ನೂರು ವರ್ಷದಿಂದ ಎಲ್ಲ ಬಗೆಯ ಜನರನ್ನು ಒಟ್ಟುಗೂಡಿಸುತ್ತ ಇಂಥದೊಂದು ಅವಕಾಶ ನೀಡುತ್ತ ಬಂದಿದೆ. ಮಾಡುತ್ತ ಬಂದಿದೆ. ರಾಮಕೃಷ್ಣ ಪರಮಹಂಸರು, ಶಾರದಾಮಾತೆಯರ ರೂಪದಲ್ಲಿ ಮುಮುಕ್ಷುಗಳಿಗೆ ಆಧ್ಯಾತ್ಮಿಕ ಸುಧೆ ಹರಿಸುತ್ತ, ಯುವಕರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತ ಬಲವಾಗಿ ನಿಂತಿದೆ. ಭಕ್ತ ಸಮ್ಮೇಳನಗಳು, ಯುವ ಸಮ್ಮೇಳನಗಳು ಈ ನಿಟ್ಟಿನಲ್ಲಿ ಸಾರ್ಥಕವಾದವುಗಳಂಥವು. ಪ್ರತಿ ವರ್ಷ ರಾಮಕೃಷ್ಣಾಶ್ರಮದಲ್ಲಿ ನಡೆಯುವ ರಾಮಕೃಷ್ಣ, ಶಾರದಾ ಮಾತೆ, ವಿವೇಕಾನಂದರ ಜಯಂತಿಯಂತೂ ಆಸ್ತಿಕರ, ಅಧ್ಯಯನಶೀಲರ ಗಮನ ಸೆಳೆಯುವಂಥವು. ಈ ಸಂಧರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನಗಳು, ಭಾವುಕರ ಮನಸೂರೆಗೊಂಡರೆ, ಆ ಸಂದರ್ಭದಲ್ಲಿನ ಪುಸ್ತಕಪ್ರದರ್ಶನ- ಮಾರಾಟ ವ್ಯವಸ್ಥೆ ಓದುಗರನ್ನ ಆಕರ್ಷಿಸುತ್ತದೆ. ಹೀಗೆ ಇಲ್ಲಿ ಹೃದಯಕ್ಕೂ ಆಹಾರ, ಬುದ್ಧಿಗೂ ಆಹಾರ. ರಾಮ ಕೃಷ್ಣರ, ಶ್ರೀಮಾತೆಯವರ, ವಿವೇಕಾನಂದರ ಮತ್ತು ರಾಮಕೃಷ್ಣ ಶಿಷ್ಯ ಪರಂಪರೆಯ ಅನೇಕಾನೇಕ ಸಂತರ ಜೀವನ ಚರಿತ್ರೆಗಳು, ಸ್ತೋತ್ರ ಮಾಲಿಕೆಗಳು, ಆಧ್ಯಾತ್ಮಿಕ ಜೀವನದಲ್ಲಿ ದಾರಿದೀವಿಗೆಗಳಾಗಬಲ್ಲ ಅದೆಷ್ಟೋ ಪುಸ್ತಕಗಳು ಈ ಪ್ರದರ್ಶನದಲ್ಲಿ ಸುಲಭ ಬೆಲೆಗೆ ದಕ್ಕುತ್ತವೆ.
ಅಂದಹಾಗೆ, ಜನವರಿ ೧ರಿಂದ ೧೫ರವರೆಗೆ ರಾಮಕೃಷ್ಣಾಶ್ರಮದಲ್ಲಿ ಪುಸ್ತಕ ಪ್ರದರ್ಶನವೇರ್ಪಡಿಸಲಾಗಿದೆ. ಈ ಸಂದರ್ಭವನ್ನು ಯಥೋಚಿತವಾಗಿಬಳಸಿಕೊಂಡು ಅದರ ಲಾಭ ಪಡೆಯಲು, ಆ ಮೂಲಕ ನಮ್ಮ ಅರಿವಿನ ಹಸಿವನ್ನು ನೀಗಿಕೊಳ್ಳಲು ಇದೊಂದು ಸುವರ್ಣಾವಕಾಶ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s