ನೆಲದ ಮಾತು

ಹೊತ್ತವಳ ನಿಟ್ಟುಸಿರು…

ರಾಮಕೃಷ್ಣಾಶ್ರಮದಲ್ಲಿ ಪುಸ್ತಕ (ಪ್ರ)ದರ್ಶನ

Posted by Chakravarty on January 6, 2008

ಸ್ವಾಮಿ ವಿವೇಕಾನಂದ! ಅದು ಬರಿಯ ಹೆಸರಲ್ಲ. ಅದೊಂದು ಶಕ್ತಿ. ಅಸೀಮ ಸ್ಫೂರ್ತಿ. ಅವರನ್ನು ಆಲಿಸುತ್ತ, ಅವರು ನಡೆದು ತೋರಿದ ದಾರಿಯಲ್ಲಿ ಹೆಜ್ಜೆಗಳನ್ನಿಡುತ್ತ ನಡೆದು ಬದುಕಿನ ಉನ್ನತ ಮಜಲುಗಳಿಗೇರಿದ ಯುವಕರ ಸಂಖ್ಯೆ ಅದೆಷ್ಟೋ… ಅದು ರಾಷ್ಟ್ರ ಪ್ರೇಮದ ಮಾತಾಗಿರಲಿ, ಸಮಾಜ ಸೇವಾ ಕ್ಷೇತ್ರವಿರಲಿ, ಅಥವಾ ಸಾಹಿತ್ಯ ಕ್ಷೇತ್ರವೇ ಆಗಿರಲಿ… ಎಲ್ಲೆಲ್ಲೂ ಹೊಸ ಹುಮ್ಮಸ್ಸಿನ ಅಲೆ ಎಬ್ಬಿಸುತ್ತ ಉತ್ಕೃಷ್ಟತೆಯ ಪತಾಕೆ ಹಾರಿಸುತ್ತ ಮೆರೆಯುವ ಏಕೈಕ ಹೆಸರು, ಸ್ವಾಮಿ ವಿವೇಕಾನಂದ.
ನಾವು ಮಾಡುವ ಯಾವುದೇ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ವಿವೇಕಾನಂದರ ಮಾತುಗಳು ಸಮರ್ಥ ಮಾರ್ಗದರ್ಶನ ನೀಡಬಲ್ಲವು. ಅವರಲ್ಲಿ ನಿರಾಶಾವಾದದ ಋಣಾತ್ಮಕ ಅಂಶವೇ ಇಲ್ಲ. ಎಂಥ ಪರಿಸ್ಥಿತಿಯಲ್ಲಿಯೂ ಸ್ವಾಮೀಜಿಯವರ ಮಾತು ಕೇಳಿದವನು ಚೈತನ್ಯದ ಚಿಲುಮೆಯಾಗಿಬಿಡುತ್ತಾನೆ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಸೋದರಿ ನಿವೇದಿತಾ, ನೇತಾಜಿ, ಅರವಿಂದರು, ಭಾಗಾ ಜತೀನ್, ಹೀಗೆ ಸಾಲು ಸಾಲು ಕ್ರಾಂತಿವೀರರು ವಿವೇಕಾನಂದರ ಪ್ರಖರ ತೇಜಸ್ಸಿನ ಸುಳಿಮಿಂಚಿಗೆ ಸಿಲುಕಿ ತಾವೂ ಧೃವತಾರೆಗಳಾದರು. ನಮ್ಮ ಕನ್ನಡದ ಕುವೆಂಪು ಅಂಥವರು ಸ್ವಾಮೀಜಿ ಚಿಂತನೆಗಳಿಂದ ಬಹಳ ಪ್ರಭಾವಿತರಾಗಿದ್ದರು. ಅವರ ಶಿಷ್ಯರಾದ ಜಿ. ಎಸ್. ಶಿವರುದ್ರಪ್ಪನವರೂ ಕೂಡ ವಿವೇಕಾನಂದರ ಮಾತುಗಳಿಂದ ಪ್ರಭಾವಿತರಾದವರೇ. ಇವರು ನಮ್ಮ ಕಣ್ಣಿಗೆ ಕಾಣುವ ಕನ್ನಡಿಗರಷ್ಟೇ. ಇನ್ನು ಇತರ ರಾಜ್ಯಗಳಲ್ಲಿ ಹೀಗೆ ಸ್ವಾಮೀಜಿ ವಿಚಾರ ಧಾರೆಗಳಿಂದ ಪ್ರಭಾವಿತರಾದ ಸಾಹಿತಿಗಳು ಅದೆಷ್ಟಿರುವರೋ?  
ಸಮಾಜ ಸೇವೆಯ ಕ್ಷೇತ್ರಕ್ಕೆ ಬಂದರೆ, ಸೋಲಿಗರ ನಡುವೆ ಕೆಲಸ ಮಾಡುವ, ಅವರಲ್ಲಿ ಬದುಕಿನ ವಿಶ್ವಾಸ ತುಂಬುತ್ತಿರುವ ಸುದರ್ಶನರು, ಹೆಗ್ಗಡೆದೇವನ ಕೋಟೆಯ ಬಾಲಸುಬ್ರಹ್ಮಣ್ಯರು, ಇವರೆಲ್ಲರ ಶಕ್ತಿಸ್ರೋತ ಸ್ವಾಮಿ ವಿವೇಕಾನಂದರೇ! ಇವರೂ ಕೂಡ ನಮ್ಮ ಸ್ಮರಣೆಗೆ ಥಟ್ಟನೆ ಬರುವ ವ್ಯಕ್ತಿಗಳು. ಇವರಂತೆ ಎಲೆ ಮರೆಯ ಕಾಯಿಗಳಾಗಿ ಸಮಾಜ ಸೇವೆಗೆ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಕಟಿ ಬದ್ಧರಾಗಿರುವವರು ಬಹಳ  ಷ್ಟಿದ್ದಾರೆ. ಇಂದಿನ ಯುವಶಕ್ತಿ ದಾರಿತಪ್ಪಿದೆ ಎಂದೆಲ್ಲ ಹೇಳು   ತ್ತೇವೆ, ಹೀಗೆ ಮಾರ್ಗಬಿಟ್ಟ ಯುವಕರನ್ನು ಮತ್ತೆ ಸರಿದಾರಿಗೆ ತರಲು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚುವುದು ಬಿಟ್ಟು ಬೇರೆ ಮಾರ್ಗವಿಲ್ಲ.
 ದೇಶಾದ್ಯಂತ ಇರುವ ರಾಮಕೃಷ್ಣಾಶ್ರಮಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಅವುಗಳಲ್ಲಿ ನಮ್ಮ ಬೆಂಗಳೂರಿನ ಆಶ್ರಮವೂ ಮುಖ್ಯವಾದುದು. “ಸುಮ್ಮನೆ ನೋಡಲೆಂದು” ಬಂದ ಅದೆಷ್ಟೋ ಯುವಕರು ಇಲ್ಲಿನ ಪ್ರಶಾಂತ ವಾತಾವರಣದ ಪ್ರಭಾವಲಯಕ್ಕೆ ಒಳಗಾಗಿ ಆಂತರಿಕ ಪರಿವರ್ತನೆ ಪಡೆದು ಹೊರನಡೆದಿದ್ದಿದೆ. ಆಶ್ರಮ ನಡೆಸುತ್ತಿರುವ ವಿದ್ಯಾರ್ಥಿಗಳ ಹಾಸ್ಟೆಲ್- ವಿದ್ಯಾರ್ಥಿ ಮಂದಿರವಂತೂ ಸಾವಿರ ಸಾವಿರ ಸಂಖ್ಯೆಯ ಯುವಕರಿಗೆ ಆದರ್ಶದ ಪಥ ರೂಪಿಸಿಕೊಟ್ಟಿದೆ, ಬದುಕಿಗೊಂದು ಧ್ಯೇಯ ಕಲ್ಪಿಸಿಕೊಟ್ಟಿದೆ. ಇದೆಲ್ಲ, ಆಶ್ರಮದ ಪೂಜಾವೇದಿಯಲ್ಲಿ ಅಪಾರ ಕರುಣೆ ಹರಿಸುತ್ತ, ತಣ್ಣಗೆ ನಗುತ್ತ ಕುಳಿತಿರುವ ಪರಮಹಂಸರ ಕರುಣೆ. ಬಂದ ಮಕ್ಕಳಿಗೆಲ್ಲ ಇಲ್ಲಿ ತಾಯಿ ಮಡಿಲಿನಲ್ಲಿರುವಂಥ ಸುರಕ್ಷತೆಯ ಭಾವ. ಜನನಿ ಶಾರದಾಮಾತೆ ಹರಸಿದ ಸ್ಥಳವಲ್ಲವೇ ಇದು? ಇಲ್ಲಿ ಈ ಬಗೆಯ ಹತ್ತು ಹಲವು ವೈಶಿಷ್ಟ್ಯಗಳು.
ಶತಮಾನದ ಇತಿಹಾಸ ಕಂಡ ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮ ಸರಿಯುತ್ತಿರುವ ಕಾಲಕ್ಕೆ ಅಗತ್ಯವಿರುವಂತಹ ಕಾರ್ಯಕ್ರಮಗಳನ್ನು ರೂಪಿಸುತ್ತ, ಯುವ ಶಕ್ತಿ ಧನಾತ್ಮಕ ದಿಕ್ಕಿನಲ್ಲಿ ಹರಿಯುವಂತೆ ಮಾರ್ಗದರ್ಶನ ಮಾಡುತ್ತ, ಸ್ವಾಮೀಜಿಯವರ ಆಶಯವನ್ನು ಸಾಕಾರಗೊಳಿಸುತ್ತಿದೆ. ಭವ್ಯ ಭಾರತದ ನಿರ್ಮಾಣ ಕೇವಲ ಕನಸಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಇಂದಿನ ಪೀಳಿಗೆ ಬೌದ್ಧಿಕ ಚರ್ಚೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂಥದ್ದು.
ಬಸವನಗುಡಿಯಲ್ಲಿರುವ ರಾಮಕೃಷ್ಣಾಶ್ರಮ ಕಳೆದ ನೂರು ವರ್ಷದಿಂದ ಎಲ್ಲ ಬಗೆಯ ಜನರನ್ನು ಒಟ್ಟುಗೂಡಿಸುತ್ತ ಇಂಥದೊಂದು ಅವಕಾಶ ನೀಡುತ್ತ ಬಂದಿದೆ. ಮಾಡುತ್ತ ಬಂದಿದೆ. ರಾಮಕೃಷ್ಣ ಪರಮಹಂಸರು, ಶಾರದಾಮಾತೆಯರ ರೂಪದಲ್ಲಿ ಮುಮುಕ್ಷುಗಳಿಗೆ ಆಧ್ಯಾತ್ಮಿಕ ಸುಧೆ ಹರಿಸುತ್ತ, ಯುವಕರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತ ಬಲವಾಗಿ ನಿಂತಿದೆ. ಭಕ್ತ ಸಮ್ಮೇಳನಗಳು, ಯುವ ಸಮ್ಮೇಳನಗಳು ಈ ನಿಟ್ಟಿನಲ್ಲಿ ಸಾರ್ಥಕವಾದವುಗಳಂಥವು. ಪ್ರತಿ ವರ್ಷ ರಾಮಕೃಷ್ಣಾಶ್ರಮದಲ್ಲಿ ನಡೆಯುವ ರಾಮಕೃಷ್ಣ, ಶಾರದಾ ಮಾತೆ, ವಿವೇಕಾನಂದರ ಜಯಂತಿಯಂತೂ ಆಸ್ತಿಕರ, ಅಧ್ಯಯನಶೀಲರ ಗಮನ ಸೆಳೆಯುವಂಥವು. ಈ ಸಂಧರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನಗಳು, ಭಾವುಕರ ಮನಸೂರೆಗೊಂಡರೆ, ಆ ಸಂದರ್ಭದಲ್ಲಿನ ಪುಸ್ತಕಪ್ರದರ್ಶನ- ಮಾರಾಟ ವ್ಯವಸ್ಥೆ ಓದುಗರನ್ನ ಆಕರ್ಷಿಸುತ್ತದೆ. ಹೀಗೆ ಇಲ್ಲಿ ಹೃದಯಕ್ಕೂ ಆಹಾರ, ಬುದ್ಧಿಗೂ ಆಹಾರ. ರಾಮ ಕೃಷ್ಣರ, ಶ್ರೀಮಾತೆಯವರ, ವಿವೇಕಾನಂದರ ಮತ್ತು ರಾಮಕೃಷ್ಣ ಶಿಷ್ಯ ಪರಂಪರೆಯ ಅನೇಕಾನೇಕ ಸಂತರ ಜೀವನ ಚರಿತ್ರೆಗಳು, ಸ್ತೋತ್ರ ಮಾಲಿಕೆಗಳು, ಆಧ್ಯಾತ್ಮಿಕ ಜೀವನದಲ್ಲಿ ದಾರಿದೀವಿಗೆಗಳಾಗಬಲ್ಲ ಅದೆಷ್ಟೋ ಪುಸ್ತಕಗಳು ಈ ಪ್ರದರ್ಶನದಲ್ಲಿ ಸುಲಭ ಬೆಲೆಗೆ ದಕ್ಕುತ್ತವೆ.
ಅಂದಹಾಗೆ, ಜನವರಿ ೧ರಿಂದ ೧೫ರವರೆಗೆ ರಾಮಕೃಷ್ಣಾಶ್ರಮದಲ್ಲಿ ಪುಸ್ತಕ ಪ್ರದರ್ಶನವೇರ್ಪಡಿಸಲಾಗಿದೆ. ಈ ಸಂದರ್ಭವನ್ನು ಯಥೋಚಿತವಾಗಿಬಳಸಿಕೊಂಡು ಅದರ ಲಾಭ ಪಡೆಯಲು, ಆ ಮೂಲಕ ನಮ್ಮ ಅರಿವಿನ ಹಸಿವನ್ನು ನೀಗಿಕೊಳ್ಳಲು ಇದೊಂದು ಸುವರ್ಣಾವಕಾಶ.

Posted in ನಮ್ಮ ನಮ್ಮ ನಡುವೆ | No Comments »

ಅನುಭಾವ ಬಿಂದುಗಳು…

Posted by Chakravarty on January 2, 2008

- 1 - 

ಕಾಣದ ನಿನ್ನ
ಅರಸಿ ಅರಸಿಯೇ ಬೇಸತ್ತೆ.
ಊಹೂಂ…!
ಇಲ್ಲಿಯೂ ದಕ್ಕಲಿಲ್ಲzen
ಅಲ್ಲೂ ದಕ್ಕಲಿಲ್ಲ.
ಮಾಡಿಟ್ಟ ಅಡುಗೆಯ ಬಿಟ್ಟು
ಭಿಕ್ಷಾಟನೆಗೆ
ಹೋಗಿದ್ದೇ ತಪ್ಪಾಯಿತೇನೋ?

- 2 -

ಮಾತಿಗೆ ನಿಲುಕದವನು
ಎನ್ನುತ್ತಲೇ
ಮಾತಾಡುತ್ತಾರೆ
ನಿನ್ನ ಬಗ್ಗೆ
ರೇಜಿಗೆ ಹುಟ್ಟುವುಷ್ಟು
ನಿನ್ನ ಕಂಡ ಮೇಲೆ
ಮಾತಾಡಲು
ಅವರಿಗೆ ಅದೆಲ್ಲಿ
ಪುರುಸೊತ್ತು!?

- 3 - 

ಹೂವು ಚೆಂದ, ಸುಂದರ
ಅನ್ನುತ್ತಲೇ ಉಳಿದೆವು,
ದುಂಬಿ ಹೀರಿತು ಮಕರಂದ.
ನಿನ್ನ ಬಗ್ಗೆ
ಹೇಳಿದ್ದೇ ಬಂತು,
ಅವ ಸವಿದ ನಿನ್ನಂದ!

- 4 - 

ಬದುಕಿಗಿಂತ ಸಾವೇ ಮೇಲು
ಅನ್ನುತ್ತಾರೆ ಕೆಲವರು.
ಬದುಕಿನ ಸವಿ ಹೀರಲಾಗದೆ,
ಸಾವಿನ ಸಾಹಸ ಮಾಡಲಾಗದೆ
ನಿತ್ಯ ಸಾಯುತ್ತಾರೆ,
ಬದುಕಿದ್ದೂ ಸತ್ತಂತಿರುತ್ತಾರೆ.

- 5 - 

ಹುಟ್ಟಿದೊಡನೆ ಅಮ್ಮನ್ನ ಕಳಕೊಂಡೆ
ಅವಳು ಹಾಲೂಡಿಸಿದ್ದರೆ,
ಈ ಅಲ್ಕೋಹಾಲು ನಾನೇಕೆ ಕುಡಿಯುತ್ತಿದ್ದೆ?
ಹಾಗಂತ ಹಲುಬುತ್ತಲೇ ಇದ್ದೆ.
ನೆನ್ನೆಯಷ್ಟೇ ಸಮಾಧಾನವಾಯಿತು
ಬಾರಿನ ನನ್ನ ಟೇಬಲ್ಲ ಪಕ್ಕದಲ್ಲಿ
ಪಾರ್ಟಿ ನಡೆದಿತ್ತು
ಅಧಿಕಾರಿಗಳು, ರಾಜಕಾರಣಿಗಳು
ಜಾಮಿನ ಮೇಲೆ ಜಾಮಿಳಿಸುತ್ತಿದ್ದರು,
‘ಹಾಲೂಡಿಸಿದ ತಾಯಿ’ಗೆ ವಿಷ ಕೊಟ್ಟು!

Posted in ಅನುಭಾವ ಬಿಂದುಗಳು | 4 Comments »

ಮೇರಾ ಹೋ ಮನ್ ಸ್ವದೇಶಿ….

Posted by Chakravarty on December 7, 2007

ಸ್ವದೇಶಿ ಎನ್ನುವುದು ಸಂಕುಚಿತ ಭಾವನೆ ಅಂತ ಕೆಲವರು ವಾದ ಹೂಡೋದನ್ನ ನಾನು ಕೇಳಿದ್ದೇನೆ. ಖಂಡಿತ ಅದು ತಪ್ಪು. ಸ್ವದೇಶೀಯತೆ ಕೇವಲ ಭಾವನೆಗೆ ಸೀಮಿತವಲ್ಲ. ಅದೊಂದು ವ್ಯವಸ್ಥೆ. ’ಸ್ವದೇಶಿ’ ಅಂದರೆ ವಿಶ್ವವೆಲ್ಲವೂ ಒಂದಾಗಿ ಸಂತೋಷದಿಂದ ಇರಬೇಕೆನ್ನುವ ವಿಶ್ವ ಮಾನವ ಧರ್ಮದ ವಿಕೇಂದ್ರೀಕೃತ ರೂಪ.

spinning.jpg

ಈ ವಿಶ್ವ ಮಾನವ ಧರ್ಮದ ಮೊದಲ ಹೆಜ್ಜೆ ಸ್ವಾರ್ಥ. ಇಲ್ಲಿ ಸ್ವಾರ್ಥ ಅಂದರೆ ತಮ್ಮ ತಮ್ಮ ಅಗತ್ಯಗಳನ್ನು ಪೂರೈಸಿಕೊಂಡು ಸ್ವಾವಲಂಬಿಗಳಾಗುವುದು ಅನ್ನುವ ವಿಸ್ತೃತಾರ್ಥವಿದೆ. ಇದು ಮೊದಲು ವೈಯಕ್ತಿಕ, ನಂತರ ಕುಟುಂಬ, ಆ ಮೂಲಕ ರಾಷ್ಟ್ರದ ಸ್ವಾರ್ಥವಾಗಿ ಮಾರ್ಪಡುತ್ತದೆ. ನಮ್ಮ ದೇಶ ಮೊದಲು ಸ್ವಾವಲಂಬಿಯಾಗಬೇಕು. ಆಗ ಇತರ ದೇಶಗಳ ಬಗ್ಗೆ, ಇಡಿಯ ಜಗತ್ತಿನ ಬಗ್ಗೆ ಚಿಂತಿಸಲು ಅರ್ಹತೆ ದೊರೆಯುತ್ತದೆ. ಇದು ಪ್ರತಿಯೊಂದು ದೇಶಕ್ಕೂ ಅನ್ವಯಿಸುವ ಮಾತು. ಸ್ವದೇಶಿ ಚಿಂತನೆ ರಾಷ್ಟ್ರದೊಳಗಿನ ಬಾಂಧವ್ಯವನ್ನು ಬೆಸೆಯಲು, ಒಗ್ಗಟ್ಟು ಮೂಡಿಸಲು ಸಹಕಾರಿ. ನಮ್ಮ ಅಗತ್ಯಗಳಿಗೆ ನಾವು ನಮ್ಮದೇ ಜನರನ್ನು ಅವಲಂಬಿಸುವುದೇ ಸ್ವದೇಶಿ. ನಮ್ಮ ಆಚಾರ ವಿಚಾರ, ಸಂಸ್ಕೃತಿ ಸಂಪ್ರದಾಯಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ರೂಢಿಸಿಕೊಳ್ಳುವ ಜೀವನ ಶೈಲಿ- ಸ್ವದೇಶಿ. ರಾಷ್ಟ್ರದ ಆರ್ಥಿಕತೆ, ಸಮಾಜದ ಎಲ್ಲ ವರ್ಗದ ಉನ್ನತಿಗಾಗಿ ಮನಸಾ ಬಯಸುವುದೂ ಸ್ವದೇಶೀಯತೆಯೇ. ಸ್ವದೇಶಿ ಚಿಂತನೆ ಅಂಧಾಭಿಮಾನವಲ್ಲ. ಅದು ದೂರ ದೃಷ್ಟಿಯ ಪ್ರತೀಕ. ರಾಷ್ಟ್ರ ಚಿಂತನೆಯ ವೈಶಾಲ್ಯತೆಯ, ಕಾಳಜಿಯ ಕ್ರಿಯಾ ರೂಪ.

ನಮ್ಮ ಆಂತರ್ಯದಲ್ಲೇನೋ ಸ್ವದೇಶಿ ಚಿಂತನೆಗಳಿರುತ್ತದೆ. ಆದರೂ ಕೆಲವು ಬಾರಿ ನಮಗೆ ಸಂಪೂರ್ಣವಾಗಿ ಈ ಶೈಲಿಯನ್ನು ಅನುಸರಿಸುವುದು ಸಾಧ್ಯವಾಗುವುದಿಲ್ಲ. ಮಾರುಕಟ್ಟೆಯಲ್ಲಿ ತುಂಬಿಕೊಂಡ ವಿದೇಶಿ ವಸ್ತುಗಳು ನಮ್ಮ ಮನೆ ತುಂಬುತ್ತಿರುತ್ತವೆ. ಇದಕ್ಕೆ ನಮ್ಮ ದೇಶದಲ್ಲೇ ತಯಾರಾಗುತ್ತಿರುವ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದೊಂದು ಕಾರಣವಾದರೆ, ಮನಸೂರೆಗೊಳ್ಳುವ ಜಾಹೀರಾತುಗಳು ನಮ್ಮನ್ನು ಮರುಳು ಮಾಡಿ ವಿದೇಶಿ ವಸ್ತುಗಳ ಕಡೆಗೆಗಮನ ಸೆಳೆಯುತ್ತವೆ. ಇಂತಹ ಜಾಹೀರಾತುಗಳಿಗಾಗಿ ಬಹುರಾಷ್ಟ್ರೀಯ ಕಂಪೆನಿಗಳು ಕೋಟ್ಯಂತರ ರೂಪಾಯಿಗಳಷ್ಟು ಹಣ ಚೆಲ್ಲುತ್ತವೆಂದರೆ, ಅವು ನಮ್ಮಿಂದ ಕೊಳ್ಳೆ ಹೊಡೆಯುವ ಲಾಭವೆಷ್ಟಿರಬಹುದು, ನೀವೇ ಊಹಿಸಿ ನೋಡಿ!

ಜಾಗತೀಕರಣದ ರೀತಿನೀತಿಗಳು ಈ ಕಂಪೆನಿಗಳೊಂದು ವರದಾನ. ಹಾಗೆ ನೋಡಿದರೆ ಜಾಗತೀಕರಣ ಎನ್ನುವ ಪದ ಹುಟ್ಟಿಕೊಂಡಿದ್ದೇ ಮುಂದುವರಿದ ರಾಷ್ಟ್ರಗಳ ಜನರು ತಿರಸ್ಕರಿಸಿದ ವಸ್ತುಗಳಿಗೊಂದು ಮಾರುಕಟ್ಟೆ ಒದಗಿಸಲಿಕ್ಕೆ! ಜಾಗತೀಕರಣದ ಹೆಸರಲ್ಲಿ ಇಂದು ವಿಶ್ವದ ನೂರಾರು ರಾಷ್ಟ್ರಗಳು ಪ್ರಬಲ ರಾಷ್ಟ್ರಗಳ ಕೈಗೆ ಸಿಕ್ಕು ನಲುಗುತ್ತಿವೆ. ಅವುಗಳ ಮೇಲೆ ಸವಾರಿ ನಡೆಸಲು ವರ್ಲ್ಡ್ ಬ್ಯಾಂಕ್ ಸಾಲದ ಆಮಿಷ ಬೇರೆ.

ಈ ರಾಷ್ಟ್ರಗಳು ತೃತೀಯ ಜಗತ್ತಿನೊಳಗೆ ಕಾಲಿಡೋದು, ನಾವು ಉನ್ನತ ತಂತ್ರಜ್ಞಾನ ಕೊಡ್ತೇವೆ ಎಂದು ಹೇಳುವ ಮೂಲಕ. ಅವುಗಳು ಒಡ್ಡುವ ಆಮಿಷಕ್ಕೆ ಬಲಿಯಾದ ರಾಜಕಾರಣಿಗಳು, ವಿದೇಶಿ ಕಂಪೆನಿಗಳು ಬಂದರೆ ದೇಶಕ್ಕೆ ತಂತ್ರಜ್ಞಾನ ಹರಿದು ಬರುತ್ತೆ ಎನ್ನುತ್ತ ಕೆಂಪು ಹಾಸಿನ ಸ್ವಾಗತ ನೀಡುತ್ತಾರೆ. ಹೀಗೆ ಈ ವರೆಗೆ ಭಾರತದ ಒಳ ನುಸುಳಿರುವ ಕಂಪೆನಿಗಳಲ್ಲಿ ಶೇ.೮೦ರಶ್ಟು ಕಂಪೆನಿಗಳು ಶೂನ್ಯ ತಂತ್ರಜ್ಞಾನ ಕ್ಷೇತ್ರದ್ದು! ಅವು ನಮಗೆ ಮಾರುತ್ತಿರುವುದು ಸಾಫ್ಟ್ ಡ್ರಿಂಕ್ಸ್, ಚಿಪ್ಸ್, ಸೋಪ್ ಇತ್ಯಾದಿ ಕೆಲಸಕ್ಕೆ ಬಾರದ ಉತ್ಪನ್ನಗಳನ್ನು!! ಈ ಯಾವ ಕಂಪೆನಿಯೂ ನಮಗೆ ಅಗತ್ಯವಾಗಿರುವ ಸಂಪರ್ಕ ತಂತ್ರಜ್ಞಾನವನ್ನಾಗಲೀ ಪರಮಾಣು ತಂತ್ರಜ್ಞಾನವನ್ನಾಗಲೀ ಜೈವಿಕ- ರಾಸಾಯನಿಕ ತಂತ್ರಜ್ಞಾನವಾಗಲೀ ಈ ಯಾವುದನ್ನೂ ಕೊಡುತ್ತಿಲ್ಲ. ಇಂದು ನಮಗೆ ಬಣ್ಣದ ಬಾಟಲಿಗಳಲ್ಲಿ ವಿಷ ಕುಡಿಸುತ್ತಿರುವ ಕೋಕ್ ಕಂಪೆನಿ ಭಾರತಕ್ಕೆ ರಿ ಎಂಟ್ರಿ ಪಡೆದಿದ್ದು ತರಕಾರಿ ಸಂಸ್ಕರಣಾ ಘಟಕ ತೆರೆಯುತ್ತೇವೆ ಎಂಡು ಹೇಳಿಕೊಂಡು. ಅದರಂಥ ಕಂಪೆನಿಗಳೆಲ್ಲವೂ ನಮ್ಮ ದೇಶದೊಳಗೆ ನುಸುಳಿ ನಮ್ಮ ಮಾರುಕಟ್ಟೆ ಮಾತ್ರವಲ್ಲ, ರಾಜಕೀಯದಲ್ಲೂ ಹಸ್ತಕ್ಷೇಪ ಮಾಡುತ್ತಿವೆ. ನಮ್ಮ ಲಘು ಉದ್ಯೋಗಗಳಿಗೆ, ಕೃಷಿ ಕ್ಷೇತ್ರಕ್ಕೆ ನಿರಂತರ ಪ್ರಹಾರ ನೀಡುತ್ತಲೇ ಇವೆ.

ಉದಾಹರಣೆಗೆ ನೋಡಿ: ಒಂದು ಅಂದಾಜಿನ ಪ್ರಕಾರ ಹಾಲೆಂಡ್ ಮೂಲದ ಬಹು ರಾಷ್ಟ್ರೀಯ ಕಂಪೆನಿ ಹಿಂದೂಸ್ಥಾನ್ ಲೀವರ್ ತಯಾರಿಸುವ ಉತ್ಪಾದನೆಯನ್ನು ಕೇವಲ ಕರ್ನಾಟಕದ ಜನತೆ ಖರೀದಿಸುವುದನ್ನು ಬಿಟ್ಟು ಸ್ವದೇಶಿ ವಸ್ತುಗಳ ಖರೀದಿಗೆ ತೊಡಗಿದರೂ ಸುಮಾರು ೫೦ ಸಾವಿರ ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಹೀಗಿರುವಾಗ ಇಡಿಯ ದೇಶ ಈ ಕಂಪೆನಿಯ ವಸ್ತುಗಳನ್ನು ಬಹಿಷ್ಕರಿಸಿದರೆ ಎಷ್ಟು ಲಕ್ಷ ಜನರಿಗೆ ಉದ್ಯೋಗ ದೊರೆಯುತ್ತದೆ ಯೋಚಿಸಿ… ಇಂಥಹ ನೂರಾರು ಕಂಪೆನಿಗಳು ಭಾರತದಲ್ಲಿವೆ. ಹೀಗೆ ಅವುಗಳ ಎಂಟ್ರಿಯಾದ ಮೇಲೆ ನಮ್ಮ ಅದೆಷ್ಟು ಕೈಗಾರಿಕೆಗಳು ಬಾಗಿಲು ಮುಚ್ಚಿವೆ ಎಂದು ನೀವೇ ಲೆಕ್ಕ ಹಾಕಿ.

ನಾವು ವಿದೇಶಿ ಕಂಪೆನಿಗಳನ್ನು ತಿರಸ್ಕರಿಸಬೇಕೆನ್ನುವುದು ಇದೇ ಕಾರಣಕ್ಕೆ. ಪ್ರತಿಯೊಬ್ಬರಿಗೂ ಪ್ರತಿಯೊಂದನ್ನೂ ರಾಷ್ಟ್ರದ ಮಟ್ಟದಲ್ಲಿ ಯೋಚಿಸೋದು ಸಾಧ್ಯವಾಗೋಲ್ಲ. ಆದರೆ ತನ್ನ ವೈಯಕ್ತಿಕ ಮಟ್ಟದಿಂದಲೇ ರಾಷ್ಟ್ರ ಮಟ್ಟದ ಚಿಂತನೆ ನಡೆಸಬಹುದು. ಅದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಆರ್ಥಿಕತೆ, ಸಂಸ್ಕೃತಿ, ತನ್ನ ಕುಟುಂಬ ಮತ್ತು ತನ್ನ ಆರೋಗ್ಯ ಇವಿಷ್ಟರಲ್ಲೂ ಸ್ವಾವಲಂಬನೆಯಿಂದ ಸಮಗ್ರ ಸುಧಾರಣೆಗೆ ಪ್ರಯತ್ನಿಸುವಂತಾಗಬೇಕು. ಆಗದೇ?

Posted in ದಿಲ್ ಹೈ ಹಿಂದೂಸ್ಥಾನಿ | 1 Comment »

ಕಂಡವರ ದುಡ್ಡಿಗೆ, ಜೀವಕ್ಕೆ ಬೆಲೆಯೇ ಇಲ್ವಾ?

Posted by Chakravarty on December 1, 2007

ಇವತ್ತಿನ ಸುದ್ದಿ ಕೇಳಿದಿರಾ?
ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಏಯ್ಡ್ಸ್ ರೋಗಿಗಳಿಗೆ ಕೊಡುವ ಔಷಧದಲ್ಲಿ ಹೇರಾಫೇರಿ ನಡೆಯುತ್ತಿದೆ. ವಿದೇಶೀ ಔಷಧ ಕಂಪೆನಿಗಳ ಎಕ್ಸ್ ಪೆರಿಮೆಂಟಿಗೆ ನಮ್ಮ ಜನರು ಬಲಿಪಶುಗಳಾಗ್ತಿದಾರೆ.
ಮೊನ್ನೆ ’ಔಷಧ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಜೀವಗಳು’ ಲೇಖನವನ್ನೋದಿದ ಕೆಲವು ಪರಿಚಿತರು, “ನೀವು ಹೇಳುವಷ್ಟೆಲ್ಲ ಕುಲಗೆಟ್ಟುಹೋಗಿಲ್ಲ ಬಿಡ್ರಿ! ಸುಮ್ನೆ ಎಲ್ಲಾವ್ದನ್ನೂ ಎಕ್ಸಾಸಿರೇಟ್ ಮಾಡ್ತೀರ” ಅಂದುಬಿಟ್ಟಿದ್ದರು. ಆಗ ನಾನು ತೀರ ನನ್ನ ಸುತ್ತ ಮುತ್ತಲೇ ನಡೆದ ಕೆಲವು ಘಟನೆಗಳನ್ನ ಹೇಳಿ ವಿಷಯದ ಗಂಭೀರತೆಯನ್ನ ಮನದಟ್ಟು ಮಾಡಿಸಬೇಕಾಯ್ತು. ಮತ್ತಿವತ್ತು ಬಂದಿದೆ ಈ ಆಘಾತಕಾರಿ ಸುದ್ದಿ.

ಖಾಸಗಿ ವೈದ್ಯರದೊಂದು ರೀತಿಯ ಹಗಲು ದರೋಡೆಯಾದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತೊಂದು ಬಗೆಯ ಕಳ್ಳತನ.
ಒಂದು ವರ್ಷದ ಹಿಂದಿನ ಮಾತು. ನನ್ನ ಊರು ಹೊನ್ನಾವರದಲ್ಲಿ,  ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯ ರೋಗಕ್ಕೆ ಮಾತ್ರೆಗಳನ್ನ ಹಂಚುತ್ತಿದ್ದರು. ಪಾಪ ಊರ ಜನ ತುಂಬ ಶ್ರದ್ಧೆಯಿಂದ ಅದನ್ನು ತೆಗೆದುಕೊಳ್ಳುತ್ತಿದ್ದರು.
ವಾರ, ತಿಂಗಳು… ಊಹೂಂ… ಎಷ್ಟು ದಿನ ಕಾದರೂ ಫಲಿತಾಂಶ ಮಾತ್ರ ಸೊನ್ನೆ!
ಆ ಊರಿನ ಒಬ್ಬ ಕುತೂಹಲಿ ಯುವಕ ಆ ಕ್ಯಾಪ್ಸೂಲನ್ನು ಸುಮ್ಮನೆ ನುಂಗದೆ, ಅದನ್ನ ಬಿಚ್ಚಿ ನೋಡಿದ. ಅದರಲ್ಲೇನಿತ್ತು ಮಣ್ಣು!? ಪೂರ್ತಿ ಖಾಲಿ!!
ಊರವರೆಲ್ಲ ಸೇರಿದರು. ಆಸ್ಪತ್ರೆಯಲ್ಲಿದ್ದ ಅಷ್ಟೂ ಕ್ಷಯದ ಮಾತ್ರೆಗಳನ್ನ ನೋಡಲಾಯ್ತು. ಎಲ್ಲವೂ ಹಾಗೇ ಖಾಲಿ ಖಾಲಿಯಾಗಿ ಬಾಯಿ ಕಳೆದುಕೊಂಡುಬಿದ್ದಿದ್ದವು!
ಅಷ್ಟೂ ದಿನ ನಂಬಿಕೆಯಿಂದ ಮಾತ್ರೆಗಳನ್ನ ನುಂಗಿದ್ದ ಜನರಿಗೆ ಎಂಥ ಆಘಾತವಾಗಿರಬೇಡ ಹೇಳಿ?

ಮತ್ತೊಂದು ಇಂಥದೇ ಕೇಸು. ಇದನ್ನ, ಲೇಖನ ಓದಿದ ನನ್ನ ಗೆಳೆಯ ರಾಜೇಶ ಹೇಳಿದ್ದು.
ಆತನ ಅಕ್ಕನಿಗೆ ಹೊಟ್ಟೆ ನೋವು ಅಂತ ದೊಡ್ಡ ನರ್ಸಿಂಗ್ ಹೋಮ್ ಒಂದಕ್ಕೆ ಕರೆದುಕೊಂಡು ಹೋಗಿದ್ದರು. ಸ್ಕ್ಯಾನ್ ಮಾಡಿ ಅವರನ್ನ ಹೊರಗೆ ಹತ್ತು ನಿಮಿಷ ಕಾಯಿಸಿ, ’ಅಪೆಂಡಿಸೈಟಿಸ್’ ಅಂತ ರಿಪೋರ್ಟು ಕೊಟ್ಟರು. ಆಪರೇಷನ್ನೇ ಗತಿ! ಮಗು ಇನ್ನೂ ಸಣ್ಣದು. ನೋಡೀಕೊಳ್ಳೋರ್ಯಾರು?
ರಾಜೇಶ ಕೊಂಚ ತಲೆ ಓಡಿಸಿ, ಇನ್ನೂ ಆರಂಭದ ಹಂತದ್ದಾದ್ದರಿಂದ ಸಧ್ಯಕ್ಕೆ ಆಪರೇಷನ್ನು ಬೇಡವೆಂದ. ಮತ್ತೆ ನೋವು ಹೆಚ್ಚಾದರೆ ಆಸ್ಪತ್ರೆಗೆ ಬರುವುದು ಅಂದುಕೊಂಡು ಮನೆ ದಾರಿ ಹಿಡಿದರು.

ಅದಾಗಿ ಒಂದೆರಡು ತಿಂಗಳು ಆಕೆಗೆ ಹೊಟ್ಟೆ ನೋವು ಬರಲೇ ಇಲ್ಲ. ಮತ್ತೊಮ್ಮೆ ರಾಜೇಶ ಮನೆ ಬಳಿಯ ವೈದ್ಯರ ಹತ್ತಿರ ಆಕೆಯನ್ನ ಕರೆದುಕೊಂಡು ಹೋಗಿ ಅಪೆಂಡಿಕ್ಸ್ ಯಾವ ಹಂತದಲ್ಲಿದೆ ಎಂದು ವಿಚಾರಿಸಿದರೆ, ಅವರು ಅಚ್ಚರಿಪಟ್ಟುಬಿಟ್ಟರು. ಅಸಲಿಗೆ ಆಕೆಗೆ ಅಪೆಂಡಿಕ್ಸ್ ಇಲ್ಲವೇ ಇಲ್ಲವೆಂದೂ, ಯಾರದೋ ರಿಪೋರ್ಟ್ ಅವರಿಗೆ ತೋರಿಸಲಾಗಿದೆಯೆಂದೂ ಆ ವೈದ್ಯರು ಹೇಳಿದಾಗ ಅಚ್ಚರಿಯಾಗುವ ಸರದಿ ರಾಜೇಶ ಮತ್ತವನ ಅಕ್ಕನದು! ಈ ಒಟ್ಟು ಘಟನೆ ನಡೆದು ಆರು ವರ್ಷಗಳಾಗಿವೆ. ರಾಜೇಶನ ಅಕ್ಕ, ಒಂದಷ್ಟು ಗ್ಯಾಸ್ಟ್ರಿಕ್ ಸಮಸ್ಯೆ ಹೊರತುಪಡಿಸಿದರೆ, ಆರಾಮಾಗಿಯೇ ಇದ್ದಾರೆ!

ದೊಡ್ಡ ಆಸ್ಪತ್ರೆಯ ಡಾಕ್ಟ್ರುಗಳನ್ನ ನೆಚ್ಚಿಕೊಂಡು ಆಪರೇಷನ್ನಿಗೆ ಸಮ್ಮತಿಸಿದ್ದರೆ, ಏನೂ ಸಮಸ್ಯೆಯಿಲ್ಲದ ಹೊಟ್ಟೆ ಕೊಯ್ದು ಅವರೇನು ಮಾಡುತ್ತಿದ್ದರು?
ಕಿಡ್ನಿ ಕದಿಯುತ್ತಿದ್ದರೇ? ಅರಿವಳಿಕೆ ಕೊಟ್ಟು ಮಲಗಿಸಿ……!? ಅಥವಾ ಓ.ಟಿ. ಒಳಗೆ ಕರೆದೊಯ್ದು ತಮ್ಮ ಪಾಡಿಗೆ ತಾವು ಟೈಂ ಪಾಸ್ ಮಾಡಿ ಹೊರಬರುತ್ತಿದ್ದರೆ? ಯಾರು ಉತ್ತರಿಸುವರು ಹೇಳಿ?  ವೈದ್ಯರು ಯಾಕೆ ಹೀಗೆ ಮಾಡ್ತಾರೆ? ಕಂಡವರ ಜೀವಕ್ಕೆ, ಅವರ ದುಡ್ಡಿಗೆ ಬೆಲೆಯೇ ಇಲ್ವಾ?

ಹಾಗಂತ ವೈದ್ಯರೆಲ್ಲ ಕೆಟ್ಟವರು, ಅಂತ ನಾನು ಹೇಳ್ತಿಲ್ಲ. ವೈದ್ಯ ವೃತ್ತಿಗೊಂದು ಘನತೆ ತಂದುಕೊಟ್ಟು ಮಾನವೀಯತೆ ಮೆರೆಯುತ್ತಿರುವ ಸಾಕಷ್ಟು ಜನರು ನಮ್ಮೊಂದಿಗಿದ್ದಾರೆ. ಅವರ ಬಗ್ಗೆ ಮತ್ತೆಂದಾದರೂ ಹೇಳುವೆ. ಆದರೆ ಅಂಥವರ ಸಂಖ್ಯೆ ಬೆರಳೆಣಿಕೆಯಷ್ಟು ಎನ್ನುವುದೇ ಖೇದದ ಸಂಗತಿ.

ಇವತ್ತಿನ ಪತ್ರಿಕೆಯಲ್ಲೊಂದು ಮತ್ತೊಂದು ಸುದ್ದಿ. ಗ್ರಾಮೀಣ ಸೇವೆ ಕಡ್ಡಾಯ ವಿರೋಧಿಸಿ ವೈದ್ಯ ವಿದ್ಯಾರ್ಥಿಗಳು ಧರಣಿ ಮಾಡಿದ ಕುರಿತು… ಅದಕ್ಕೆ ಪ್ರತಿಕ್ರಿಯೆ ಕೂಡ ನೀಡಲಾಗದಷ್ಟು ಮನಸ್ಸು ಮುರಿದುಹೋಗಿದೆ. ವೈದ್ಯಕೀಯ ಸೇವೆ ಅನ್ನುವುದು, ಹಣ ಮಾಡುವ ದಂಧೆಯಾಗಿದ್ದು ಯಾವಾಗ?

ಇರಲಿ. ಇವತ್ತು ನಾನು ಮತ್ತೆ ಇವೆಲ್ಲವನ್ನೂ ಬರೆಯಲು ಕಾರಣವಿದೆ.
ಹಿಂದಿನ ಲೇಖನದಲ್ಲಿ ನಾನು ಉಲ್ಲೇಖಿಸಿದ್ದ ನನ್ನ ಪ್ರೀತಿಯ ಮೇಷ್ಟ್ರು ನಮ್ಮನ್ನಗಲಿ ಹೋಗಿಬಿಟ್ಟರು.
ಆಪರೇಷನ್ನು, ಅದಕ್ಕೆ ದುಡ್ಡು ಹೊಂದಿಸುವ ಪೀಕಲಾಟ, ಜೀವ ಬಾಯಿಗೆ ತರುವ ಬಿಕ್ಕಳಿಕೆ… ಇವೆಲ್ಲವನ್ನೂ ಬಿಟ್ಟು ನಡೆದುಬಿಟ್ಟರು. ಒಂದು ತಿಂಗಳ ಅವಧಿಯಲ್ಲಿ ನಡೆದ ಈ ದುರಂತಕ್ಕೆ ಅವರ ಕುಟುಂಬ ಭರಿಸಿದ್ದು (ವ್ಯಯಿಸಿದ್ದು ಅನ್ನದೆ ವಿಧಿ ಇಲ್ಲ) ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿಗಳು!

ಈಗ ತಾನೇ ಅವರ ಅಂತ್ಯ ಸಂಸ್ಕಾರ ಮುಗಿಸಿ ಬಂದೆ. ನಿಮ್ಮೆದುರು ನೋವು ಹಂಚಿಕೊಳ್ಳಬೇಕನಿಸಿತು. ಅಷ್ಟೇ…

Posted in ನಮ್ಮ ನಮ್ಮ ನಡುವೆ | 1 Comment »

ಔಷಧ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಜೀವಗಳು…

Posted by Chakravarty on November 25, 2007

                                                  home-FOCUS
ವೈದ್ಯಕೀಯ ಜಗತ್ತು ಇತ್ತೀಚೆಗೆ ಅತ್ಯಂತ ದುಬಾರಿ ಜಗತ್ತಾಗಿದೆ ಅಂತ ಅನ್ನಿಸ್ತಿಲ್ವಾ? ಕೈಕಾಲು ಮುರಿದುಕೊಂಡೋ, ಎದೆ ನೋವು ಅಂತಲೋ, ಕಣ್ಣು ನೋವು ಅಂತಲೋ ಆಸ್ಪತ್ರೆಗೆ ಹೋಗಿ ನೋಡಿ, ಹತ್ತಿಪ್ಪತ್ತು ಸಾವಿರದ ಕಮ್ಮಿ ಕೈಬಿಡದೆ ನೀವು ಹೊರಗೆ ಬಂದರೆ ಆಮೇಲೆ ಹೇಳಿ!  ಹೋಗಲಿ, ಇಷ್ಟಾದರೂ ನಮ್ಮ ಸಮಸ್ಯೆ ಬಗೆ ಹರಿದಿರುತ್ತಾ? ಹೊಟ್ಟೆ ನೋವು ಅಂತ ಹೋದವರು ಅಪೆಂಡಿಸೈಟಿಸ್ಸನ್ನೋ, ಹರ್ನಿಯಾವನ್ನೋ ಹೊತ್ತು ತಂದಿರುತ್ತಾರೆ. ಇನ್ನು ದೊಡ್ಡ ದೊಡ್ಡ ಖಾಯಿಲೆಗಳ ಹೆಸರನ್ನೇ ಹೇಳಿಕೊಂಡು ಒಳಹೊಕ್ಕವರ ಪಾಡು ಕೇಳುವುದಂತೂ ಬೇಡ! ಆದರೆ ಕೆಲವು ಬಾರಿ ಪೂರಾ ಅದಕ್ಕೆ ವಿರುದ್ಧ. ಅಸಲು ದೊಡ್ಡ ಖಾಯಿಲೆಯಿದ್ದವರೂ ’ಜ್ವರ’, ’ಇನ್ಫೆಕ್ಷನ್’ ಇತ್ಯಾದಿ ಉಡಾಫೆಯ ರಿಪೋರ್ಟ್ ಹಿಡಿದು ಹೊರಬರುತ್ತಾರೆ!!ನಾವು ’ಗರ್ವ’ ಪತ್ರಿಕೆಯನ್ನು (ಆಮೇಲಿನದ್ದಲ್ಲ, ಆರಂಭದ ಗರ್ವ) ನಡೆಸುತ್ತಿದ್ದಾಗ ಮಧು ಅನ್ನೋ ಶೃಂಗೇರಿಯ ಹುಡುಗ ನಮ್ಮೊಂದಿಗಿದ್ದ. ಆಗ ತಾನೇ ಇಪ್ಪತ್ತು ದಾಟಿದ್ದವ. ಆಗಾಗ ಜ್ವರ ಬಂದು ಹೋಗುತ್ತಿತ್ತು. ಆರಂಭದಲ್ಲಿ ಡಾಕ್ಟರುಗಳು “ಜ್ವರ ಅಷ್ಟೇ” ಅಂದು ಮಾತ್ರೆ- ಇಂಜೆಕ್ಷನ್ನುಗಳಲ್ಲೇ ಪೂರೈಸಿದ್ದರು. ಹೀಗೆ ವೈದ್ಯರಿಂದ ವೈದ್ಯರಿಗೆ ಅಲೆದಲೆದು ಕೊನೆಗೆ ಒಂದಷ್ಟು ಪರೀಕ್ಷೆಗಳ ನಂತರ ಅದು ಬ್ಲಡ್ ಕ್ಯಾನ್ಸರ್ ಅಂತ ಗೊತ್ತಾಯ್ತು. ಆಪರೇಷನ್ ಖರ್ಚು ಎರಡು ಲಕ್ಷ! ಬಡವರ ಮನೆ ಹುಡುಗ ಮಧು. ಹಣ ಎಲ್ಲಿಂದ ಬರಬೇಕು? ಹೋಗಲಿ ಕಷ್ಟಪಟ್ಟು ಹೊಂದಿಸಿಕೊಟ್ರೆ ಅವನು ಉಳ್ಕೊಳ್ತಾನಾ? ಹಾಗಂತ ಕೇಳಿದ್ರೆ ಡಾಕ್ಟ್ರು ಮೇಲೆ ನೋಡಿ, ಫಿಫ್ಟಿ ಪರ್ಸೆಂಟ್ ಗ್ಯಾರೆಂಟಿ ಕೊಡಬಹುದಷ್ಟೇ ಅಂದುಬಿಟ್ರು. ಅವರ ಖಾತ್ರಿ ಇದ್ದುದು ಸಾವಿನದ್ದೋ ಬದುಕಿನದ್ದೋ ಗೊತ್ತಾಗಲಿಲ್ಲ. ಮಧು ಊರಿಗೆ ಹೋದ. ಅದು ಹೇಗೋ ತನಗಿದ್ದ ರೋಗದ ಬಗ್ಗೆ ತಿಳಿಯಿತು. ನಡುವಿನೊಂದು ದಿನ ತಣ್ಣಗೆ ಎಲ್ಲರನ್ನೂ ಬಿಟ್ಟು ನಡೆದುಬಿಟ್ಟ.
home-focus.jpg
Read the rest of this entry »

Posted in ’ಜಾಗಟೆ’ಕರಣ | 5 Comments »

ರಾಮ ನಂಬಿಕೆ ಇರಬಹುದು… ಥೋರಿಯಮ್ ನಿಕ್ಷೇಪ ಮಾತ್ರ ವಾಸ್ತವವೇ ಹೌದು

Posted by Chakravarty on November 14, 2007

ಭಾರತ ಭಾವನೆಗಳ ನಾಡು. ಅದರಲ್ಲಿ ಎರಡು ಮಾತಿಲ್ಲ. ಇಲ್ಲಿ ಭಾವನೆಗಳಿಲ್ಲದೆ ಯಾವ ಕೆಲಸವೂ ನಡೆಯಲಾರದು. ಪ್ರತಿಯೊಂದು ಘಟನೆಯನ್ನು ಶುಷ್ಕವಾಗಿ ಓದದೇ ಅದನ್ನು ಬದುಕಿಗೆ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸುವುದರಿಂದಲೇ ಇಲ್ಲಿನ ಜನರಿಗೆ ರಾಮಾಯಣ, ಮಹಾಭಾರತಗಳು ಚಿರಪರಿಚಿತ. ಉದಾಹರಣೆಗೆಂದೇ ಇಟ್ಟುಕೊಳ್ಳಿ, ನಮ್ಮಲ್ಲಿ ಯಾರಾದರೂ ಮಿತಿಮೀರಿ ನಡೆದರೆ, ನಿಯಮಗಳನ್ನ ಉಲ್ಲಂಘಿಸಿದರೆ, “ಲಕ್ಷ್ಮಣ ರೇಖೆ ದಾಟಿದರೆ ಆಗೋ ಅನಾಹುತ ಗೊತ್ತಲ್ಲಾ?” ಅನ್ನುತ್ತಾರೆ. ಆ ಕ್ಷಣಕ್ಕೆ ರೇಖೆ ಹಾಕಿದ ಲಕ್ಷ್ಮಣ, ದಾಟಿದ ಸೀತೆ, ಅವಳನ್ನು ಹೊತ್ತೊಯ್ದ ರಾವಣ, ಬಿಡಿಸಿಕೊಂಡು ಬಂದ ರಾಮ ಎಲ್ಲರೂ ಹಾಗೇ ಮನದ ಮೂಲೆಯಲ್ಲಿ ಹಾದು ಹೋಗುತ್ತಾರೆ ಅಲ್ಲವೇ? ಇದೇ ಇಲ್ಲಿನ ವೈಶಿಷ್ಟ್ಯ. ಇವೆಲ್ಲವನ್ನೂ ಬದುಕನ್ನು ರೂಪಿಸುವ ಆಧಾರದ ಹಿನ್ನೆಲೆಯಲ್ಲಿ ಸ್ವೀಕರಿಸಬೇಕೇ ಹೊರತು, ವೈಜ್ಞಾನಿಕ ಆಧಾರದ ಹಿನ್ನೆಲೆಯಲ್ಲಲ್ಲ!

ನಮ್ಮ ದೌರ್ಭಾಗ್ಯ ಹೇಗಿದೆ ನೋಡಿ… ಬೇರೆ ದೇಶ- ಧರ್ಮದವರಿರಲಿ, ನಮ್ಮವರೇ ನಮ್ಮ ಸಂಸ್ಕೃತಿಯನ್ನ, ಸಂಪ್ರದಾಯವನ್ನ, ನಂಬಿಕೆಗಳನ್ನ ಪ್ರಶ್ನಿಸುತ್ತಾರೆ. ಹಾಗೆ ಪ್ರಶ್ನಿಸುವ ಹಕ್ಕು ಖಂಡಿತಾ ಇದೆ. ಆದರೆ ಅವರದು ಪ್ರಶ್ನಿಸುವಿಕೆಯಲ್ಲ, ಹೀಯಾಳಿಕೆ ಅನ್ನೋದೊಂದು ದುರಂತ.  ಮೂಢ ನಂಬಿಕೆಗಳು ಮಿತಿಮೀರಿ ಅದರಿಂದ ಜೀವಕ್ಕೆ, ಸಮಾಜಕ್ಕೆ ಘಾತವಾಗುವ ಸಂದರ್ಭದಲ್ಲಿ ಅದು ಸರಿಹೋದೀತು. ಆದರೆ ಇವರ ಮೂದಲಿಕೆಗಳು ತಿರಾ ನಿರುಪದ್ರವಿ ರಾಮ, ಕೃಷ್ಣ ಇತ್ಯಾದಿ ದೇವತೆಗಳ, ಅವರ ಚರಿತ್ರೆಯ ವಿಷಯದಲ್ಲೆಲ್ಲ ತೂರಿಕೊಳ್ಳುವುದೊಂದು ವಿಪರ್ಯಾಸ. ಆದರೂ ನನಗೆ ಅರ್ಥವಾಗದಒಂದು ವಿಷಯವಿದೆ. ಹೀಗೆ ನಂಬಿಕೆಗಳನ್ನು ಪ್ರಶ್ನಿಸುವ ಅವರ ತೆವಲಿಗೆ ಕೇವಲ ಹಿಂದುಗಳೇ ಗುರಿಯಾಗೋದೇಕೆ?

ಅಗ್ನಿ ಹೊತ್ತಿಸಿದಾಗ ಅದರಲ್ಲಿ ಮೂಡಿಬಂದ ಆಕಾರ ಹಿಂದಿನ ಪೋಪರದು, ಅವರು ಈಗಲೂ ಆ ರೂಪದಲ್ಲಿ ನಮ್ಮೊಡನಿದ್ದಾರೆ ಎಂದು ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿದೆವಲ್ಲ, ಆಗ ನಮಗ್ಯಾರಿಗೂ ವೈಜ್ಞಾನಿಕ ಅಂಶಗಳ ಬಗ್ಗೆ ಯೋಚನೆಯೇ ಬರಲಿಲ್ಲವಲ್ಲ! ಬೆಂಕಿಯ ಮೂಲಕ ಬಂದು ದರ್ಶನ ಕೊಟ್ಟ ಪೋಪ್, ದೇಹ ಧರಿಸಿ ಬರಲಾರರೇ? ಎಂದು ನಾವೇಕೆ ಕೇಳಲಿಲ್ಲ? ಹಾಗೆ ಕೇಳಬಾರದು ಅನ್ನೋದು ಯಾಕೆ ಗೊತ್ತಾ? ಅದು ಶ್ರದ್ಧೆಯ ವಿಚಾರ. ಅದನ್ನು ಪ್ರಶ್ನಿಸಬಾರದು, ಹೀಯಾಳಿಸಬಾರದು! ಅದೇನೋ ಸರಿಯೇ. ಆದೇ, ಹಿಂದೂಗಳಾ ಯಜ್ಞ ಕುಂಡದಿಂದ ದೇವತೆಯ ಆಕೃತಿ ಮೂಡಿಬಂದರೆ, ಹಾಗೆಂದು ನಂಬಿಕೊಂಡರೆ, ಅದೆಷ್ಟು ಕಾಮೆಂಟುಗಳು ಹಾದಿಬೀದಿಯಲ್ಲಿ ಒದ್ದಾಡುತ್ತಿರಲಿಲ್ಲ ಹೇಳಿ!?

ಹಾಗೆ ಪ್ರಶ್ನೆ ಕೇಳುತ್ತ ಹೋದರೆ, ಜೀಸಸ್ ನೀರನ್ನು ಮುಟ್ಟಿ ಹೆಂಡ ಮಾಡಿದ್ದು ನಿಜವಾ? ಮೋಸೆಸ್ “ಭರವಸೆಯ ಭೂಮಿ” ಕೇಳಿ ಸಮುದ್ರದ ನಡುವೆ ಹಾದಿ ಬಿಡಿಸಿಕೊಂಡು ಹೋದನಲ್ಲ, ಅದು ಕೂಡ ಸತ್ಯವಾ? ಪೈಗಂಬರರ ಕೂದಲು ಕಾಶ್ಮೀರದ ಹಜರತ್ ಬಾಲ್ ಮಸೀದಿಯಲ್ಲಿದೆ ಅಂತಾರಲ್ಲ, ಹಾಗೆ ಪೈಗಂಬರರಿಗೂ ಮಸೀದಿಯಲ್ಲಿರುವ ಕೂದಲಿಗೂ ನಿಜಕ್ಕೂ ಸಂಬಂಧವಿದೆಯಾ? ಬುದ್ಧನ ಹಲ್ಲು ಶ್ರೀಲಂಕಾದಲ್ಲಿದೆ ಅಂತಾರೆ, ಹಾಗೆ ಬುದ್ಧನ ಹಲ್ಲು ಬೀಳೋದನ್ನೇ ಕಾದುಕೊಂಡು ಅದನ್ನ ಅಲ್ಲಿ ಕೊಂಡೊಯ್ದದ್ದು ಯಾರು? ಇವು ಕೂಡ ಕೇಳಬೇಕಾದ ಪ್ರಶ್ನೆಗಳೇ ಅನ್ನಿಸತ್ತೆ. ಆದರೆ, ಪರಂಪರಾನುಗತವಾಗಿ ಬಂದ ನಂಬಿಕೆಗಳಾನ್ನ ಪ್ರಶ್ನಿಸಿ ಆಘಾತ ಮಾಡಬಾರದು ಅನ್ನುವ ಕಾರಣದಿಂದ ಅವು ಪ್ರಶ್ನೆಗಳಾಗೋದಿಲ್ಲ.

ಈಗ ಮತ್ತೆ ರಾಮನತ್ತ ಬರೋಣ. ಒಂದಷ್ಟು ಉತ್ಪ್ರೇಕ್ಷೆಗಳನ್ನು ಬಿಟ್ಟರೆ ರಾಮನ ಕಥೆಯಲ್ಲಿ ಸಂಭವಿಸಲು ಸಾಧ್ಯವಿಲ್ಲ ಅನ್ನುವಂಥ ಯಾವ ವಿವರಣೆಗಳೂ ಇಲ್ಲ. ಆತನ ಆಡಳಿತ ಸೂತ್ರಗಳು ಇಂದಿಗೂ ಅದೆಷ್ಟು ಗಟ್ಟಿ ಅಂದರೆ, ಎಂಬಿಎ ವಿದ್ಯಾರ್ಥಿಗಳಿಗೆ ಬೋಧಿಸಲು ಅವನ್ನು ಹಾಗೆ ಹಾಗೇಯೇ ಬಳಸಿಕೊಳ್ಳಲು ಯೋಜನೆ ತಯಾರಿಸಲಾಗುತ್ತಿದೆ. ಭಾರತಕ್ಕೆ ಜಾತ್ಯತೀತತೆಯ ಪಾಠ ಹೇಳಿಕೊಟ್ಟ ಗಾಂಧೀಜಿಯವರೂ ರಾಮ ರಾಜ್ಯದ ಕನಸು ಕಂಡು, ಅದನ್ನು ನನಸಾಗಿಸುವ ಆಸೆ ಇರಿಸಿಕೊಂಡಿದ್ದರು. ಆಗೆಲ್ಲ ಅವರ ರಾಮ ರಾಜ್ಯದ ಪರಿಕಲ್ಪನೆ ಇದ್ದಿದ್ದು ಇಂದಿನ ಬಿಜೆಪಿ ಯ ರಾಜಕೀಯದ ರಾಮರಾಜ್ಯದಂತಲ್ಲ. ಗಾಂಧೀಜಿ ಕಲ್ಪನೆಯಲ್ಲಿ ರಾಮ ಹಿಂದೂವಾಗಿರಲಿಲ್ಲ…. ಕೇವಲ ಹಿಂದೂ ಮಾತ್ರ ಆಗಿರಲಿಲ್ಲ…. ಅವನು ಪ್ರತಿಯೊಬ್ಬರೂ ಅನುಸರಿಸಬೇಕಾದ ಆದರ್ಶವಾಗಿದ್ದ.

ಈಗ ರಾಮಸೇತುವಿಗೆ ಬನ್ನಿ. ಈಗಿನ ವಿವಾದದ ಕೇಂದ್ರಬಿಂದು ಅದೇ ತಾನೇ?  ನಮ್ಮ ನಂಬಿಕೆ ಒತ್ತಟ್ಟಿಗಿರಲಿ. ನಾವು ಹಿಂದೆಮುಂದೆ ಗೊತ್ತಿಲ್ಲದೆ ಆ ಯೋಜನೆಯನ್ನು ವಿರೋಧಿಸೋದು ಬೇಡ. ಈ ಯೋಜನೆಯಿಂದ ಬೆಸ್ತರ ಪಡಿಪಾಟಲು ಎಂಥದ್ದಾಗುತ್ತದೆಂದು ನಮ್ಮ ಸರ್ಕಾರಗಳ ಪರಿಹಾರ ಯೋಜನೆಗಳನ್ನು ಕಂಡವರೆಲ್ಲರಿಗೂ ಗೊತ್ತೇ ಇರುತ್ತದೆ. ಅಷ್ಟಾದರೂ ನಮ್ಮ ರಾಜಕಾರಣಿಗಳಿಗೆ ರಾಮಸೇತುವನ್ನು ಒಡೆದು, ಅಲ್ಲಿ ಹಡಗುಗಳು ಹಾದುಹೋಗುವ ಅವಕಾಶ ಮಾಡಿಕೊಡಬೇಕಾಗಿದೆ.

ಈ ಯೋಜನೆಯಿಂದ ಅಪಾರ ಇಂಧನ ಮತ್ತು ಶ್ರೀಲಂಕಾ ಸುತ್ತಿ ಬರುವ ಸಮಯ ಎರಡೂ ಉಳಿತಾಯವಾಗುತ್ತದೆಂದು ಜನರ ಹಾದಿ ತಪ್ಪಿಸುವ ಪ್ರಯತ್ನ ವ್ಯವಸ್ಥಿತವಾಗಿ ಸಾಗುತ್ತಿದೆ.  ಆದರೆ ಈ ಯೋಜನೆಯ ಅಧ್ಯಯನದಲ್ಲಿ ವಿಶೇಷ ಆಸಕ್ತಿವಹಿಸಿರುವ  ಕ್ಯಾಪ್ಟನ್ ಬಾಲಕೃಷ್ಣ ಅವರ ಪ್ರಕಾರ, ಕೋಲ್ಕೊತಾದಿಂದ ತೂತ್ತುಕುಡಿ (ಟುಟುಕಾರ್ನ್)ಗೆ  ಈ ಮಾರ್ಗದ ಮೂಲಕ ಪ್ರಯಾಣಿಸಿದರೆ ಉಳಿತಾಯವಾಗುವ ಸಮಯ ಕೇವಲ ಒಂದೂವರೆ ಗಂಟೆ!
ದೊಡ್ಡ ದೊಡ್ಡ ಹಡಗುಗಳಿಗೆ ೩೦ ಸಾವಿರ ಟ್ನ್ ನಷ್ಟು ಭಾರವೆಂದರೆ ಅತಿ ಕಡಿಮೆ. ಅದನ್ನು ’ಡೆಡ್ ವೈಟ್’ ಅನ್ನುತ್ತಾರೆ. ಅಷ್ಟು ಕಡಿಮೆ ಭಾರ ಹೊತ್ತ ಹಡಗನ್ನು ಯಾವ ನಾವಿಕ ಕೂಡ ಈ ಕಾಲುವೆಯ ಮೂಲಕ ಒಯ್ಯಲು ಇಚ್ಚಿಸಲಾರ. ಹಾಗೆಂದು ಅಪಾರ ಅನುಭವವುಳ್ಳ ಬಾಲಕೃಷ್ಣರ ಹೇಳಿಕೆ.
೧೫೦ ಕಿ.ಮೀ.ಗೂ ಹೆಚ್ಚು ದೂರವನ್ನು ೬ ನಾಟಿಕಲ್ ಮೈಲ್ ನಷ್ಟು ವೇಗದಲ್ಲಿ ಸಾಗಲು ೫ ಲಕ್ಷದಷ್ಟು ಶುಲ್ಕ ಕಟ್ಟುವ ಧೈರ್ಯ, ಮೂರ್ಖತನ ಎರಡನ್ನೂ ಯಾರೂ ಮಾಡಲಾರರು ಬಿಡಿ!

ಬರಿ ಇಷ್ಟೆ ಅಲ್ಲ, ಈ ಯೋಜನೆಯಿಂದ ನಮಗೆ ಮತ್ತೊಂದು ಭಾರೀ ನಷ್ಟ ಕಾದಿದೆ… ರಾಮಸೇತುವಿನ ಬಳಿಯ ಸಾಗರದ ಹರಿವಿನ ತೀವ್ರತೆಯಿಂದಾಗಿ ಅಲ್ಲಿ ಥೋರಿಯಮ್ ಎಂಬ ಧಾತುವಿನ ಪ್ರಮಾಣ ಸಾಕಷ್ಟಿದೆ. ಕೇರಳದ ಕೆಲವು ಭಾಗಗಳಲ್ಲಿ, ತಮಿಳುನಾಡಿನ ಅನೇಕ ಭಾಗಗಳಲ್ಲಿ ಕಂಡುಬರುವ ಈ ಥೋರಿಯಮ್, ಭವಿಷ್ಯ ಭಾರತದ ವಿದ್ಯುತ್ ಕೊರತೆ ನೀಗಿಸಲಿರುವ ಭಂಡಾರ ಎಂದೇ ಭಾವಿಸಲಾಗುತ್ತದೆ. ಭಾರತ್ ಅಟಾಮಿಕ್ ರಿಸರ್ಚ್ ಸೆಂಟರಿನ ಅಧ್ಯಯನದ ಪ್ರಕಾರ, ಭಾರತದಲ್ಲಿರುವ ಒಟ್ಟು ಥೋರಿಯಮ್ ಪ್ರಮಾಣ ೩ ಲಕ್ಷ ೬೦ ಸಾವಿರ ಟನ್ ನಷ್ಟಾದರೂ ಇದೆ.  ಇಷ್ಟು ಪ್ರಮಾಣಾದ ಥೋರಿಯಮ್ ಅನ್ನು ರಿಯಾಕ್ಟರ್ ಗಲಳಲ್ಲಿ ಸೂಕ್ತವಾಗಿ ಬಳಸಿಕೊಂಡರೆ, ೩ಲಕ್ಷ೫೮ಸಾವಿರ ಗಿಗಾವ್ಯಾಟ್ ಎಲೆಕ್ಟ್ರಿಕಲ್ಸ್ ನಷ್ಟು ವಿದ್ಯುತ್ ಉತ್ಪಾದಿಸಬಹುದು. ಇನ್ನೂ ಸರಳವಾಗಿ ಹೇಳಬೇಕೆಂದರೆ, ನಮ್ಮಲ್ಲಿರುವ ಥೋರಿಯಮ್ ನಿಕ್ಷೇಪ ಮುಂದಿನ ೩೮೯ ವರ್ಷಗಳ ಕಾಲ ೪ ಲಕ್ಷ ಮೆಗಾವ್ಯಾಟ್ ನಷ್ಟು ವಿದ್ಯುತ್ತನ್ನು ಪ್ರತಿ ವರ್ಷ ಉತ್ಪಾದಿಸಬಲ್ಲದು. ಬರಲಿರುವ ಶತಮಾನ, ಭಾರತದ ಶತಮಾನವಾಗಲು ಈ ಒಂದು ಅಂಶವೇ ಸಾಕು!

ಸಧ್ಯದ ಮಟ್ಟಿಗೆ ಥೋರಿಯಮ್ ಬಳಸಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಭಾರತದಲ್ಲಿಲ್ಲ. ಅಮೆರಿಕದೊಂದಿಗೆ ಅಣು ಒಪ್ಪಂದ ಮಾಡಿಕೊಳ್ಳುವ ಬದಲು, ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರೆ, ಭಾರತ ಬರಲಿರುವ ದಿನಗಳಲ್ಲಿ ಸ್ವಾವಲಂಬಿಯಾಗಿ ತಲೆ ಎತ್ತಿ ನಡೆಯಬಹುದಿತ್ತೆಂಬುದರಲ್ಲಿ ವಿಜ್ಞಾನಿಗಳಿಗಂತೂ ಯಾವ ಸಂಶಯವೂ ಇಲ್ಲ.

ಆದರೆ, ಈಗ ರಾಮ ಸೇತು ಸಾಶದಿಂದ ಥೋರಿಯಮ್ ನಿಕ್ಷೇಪದ ಮೇಲೆ ಆಘಾತವಾಗುವ ಸಾಧ್ಯತೆ ದಟ್ಟವಾಗಿದೆ. ತಡೆಗೋಡೆಯಂತಿರುವ ಸೇತುವೆಯ ಒಡೆಯುವಿಕೆಯಿಂದ ಮುನ್ನುಗ್ಗುವ ಭೀಕರ ಅಲೆಗಳಿಂದ ಅಥವಾ ಸುನಾಮಿಯಂಥಹ ಅವಘಾಡಗಳಿಂದ ಈ ನಿಕ್ಷೇಪ ಸಮುದ್ರದೊಳಗೆ ಕರಗಿಹೋಗುವ ಸಂಭಾವವಿದೆ ಎನ್ನುವುದು ವಿಜ್ಞಾನಿಗಳ ಅಳಲು.
ಅದಕ್ಕಿಂತ ದೊಡ್ಡ ದುರಂತವೆಂದರೆ, ಥೋರಿಯಮ್ ನಿಕ್ಶೇಪ ಹೊತ್ತ ಆ ಮರಳನ್ನು ಅಮೆರಿಕಕ್ಕೆ ರಫ್ತು ಮಾಡುವ ಪ್ರಯತ್ನ ನಡೆದಿರುವುದು.
 ಹಿಂದಿನ ಚರಿತ್ರೆ, ಪುರಾಣ, ಜನರ ಭಾವನೆಗಳ ಮಾತು ಬಿಡಿ. ಯಾವ ದೇಶವೂ ಹೀಗೆ ತನ್ನ ವರ್ತಮಾನದ ನಿಧಿಯನ್ನು ಪರಭಾರೆ ಮಾಡುವ ಮೂರ್ಖತನ ಮಾಡಲಾರದು. ನಮ್ಮ ದೇಶವೊಂದನ್ನು ಬಿಟ್ಟು!

Posted in Uncategorized | 6 Comments »

ನಲುಗುತ್ತಿದೆ ಭಾರತ

Posted by Chakravarty on November 11, 2007

ಬಲು ಹಳೆಯ ಕತೆ. ಒಬ್ಬ ಕುರುಡ ಮತ್ತೊಬ್ಬ ಕುಂಟನ ಕತೆ. ಒಮ್ಮೆ ಇಬ್ಬರೂ ನಿರ್ಧಾರ ಮಾಡುತ್ತಾರೆ. ಕುರುಡ ಕುಂಟನನ್ನು ಹೆಗಲ ಮೆಲೆ ಕೂರಿಸಿಕೊಳ್ಳುತ್ತಾನೆ. ಕುಂಟ ದಾರಿ ತೋರುತ್ತಾನೆ, ಕುರುಡ ದಾರಿ ಸವೆಸುತ್ತಾನೆ. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಇಬ್ಬರೂ ಹೊಟ್ಟೆ ತುಂಬಿಸಿಕೊಳ್ಳತೊಡಗುತ್ತಾರೆ. ಇದೆಲ್ಲ ಮೊದ ಮೊದಲು ಚೆನ್ನಾಗಿಯೇ ನಡೆದಿತ್ತು. ಬರಬರುತ್ತಾ ಕುಂಟ ಸ್ವಾರ್ಥಿಯಾಗತೊಡಗಿದ. ಭಿಕ್ಷೆಯಲ್ಲಿ ದೊರೆತ ಒಳ್ಳೆಯ ಪದಾರ್ಥಗಳನ್ನು ತಾನು ತಿಂದು, ಹಳಸಿದ, ಅಯೋಗ್ಯ ಆಹಾರವನ್ನು ಕುರುಡನಿಗೆ ಕೊಡತೊಡಗಿದ. ಹೇಗೂ ಕಣ್ಣು ಕಾಣದಲ್ಲ!? ಇತ್ತ ಕುಂಟ ಚೆನ್ನಾಗಿ ತಿಂದುಂಡು ಬಲಿಷ್ಟನಾದರೆ, ಅತ್ತ ಕುರುಡ ಸತ್ವ ಹೀನನಾಗಿ ಕೃಶನಾಗುತ್ತಾ ಸಾಗಿದ.

globalization.jpg

ಈ ಕಥೆ ನಮ್ಮ ದೇಶಕ್ಕೆ ಹೊಂದುವ ಮಾತು. ಕತೆಯ ಕುಂಟ ಇಂಡಿಯಾ, ಕುರುಡ ಭಾರತ! ಜಾಗತೀಕರಣದ ಸೌಲಭ್ಯ, ಸವಲತ್ತುಗಳನ್ನು ಪಡೆದು ಕೊಬ್ಬಿ ಬೆಳೆಯುತ್ತಿರುವ ಇಂಡಿಯಾ ಸವಾರಿ ಮಾಡುತ್ತಿರುವುದು, ಅದರ ದುಷ್ಪರಿಣಾಮ ಉಣ್ಣುತ್ತಿರುವ ಭಾರತದ ಮೇಲೆ!

ಜಾಗತೀಕರಣ ಅಂದ್ರೆ, ಇಡಿಯ ಜಗತ್ತನ್ನೇ ಒಂದು ಹಳ್ಳಿಯಾಗಿಸುವ ಒಂದು ಪ್ರಕ್ರಿಯೆ. ’ಗ್ಲೋಬಲ್ ವಿಲೇಜ್’ ಅನ್ನುವ ಮಾತು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ನಮ್ಮಲ್ಲಿ ಬಹುತೇಕರಿಗೆ ಗೊತ್ತಿಲ್ಲ, ಜಾಗತೀಕರಣದ ನಮ್ಮ ಕಲ್ಪನೆ ಇನ್ನೂ ವಿಶಾಲ, ಆಳ. ಜಗತ್ತು ಹಳ್ಳಿಯ ಮಾತಾಡಿದರೆ, ನಾವು ಕುಟುಂಬದ ಮಾತಾಡುತ್ತೇವೆ. ಜಗತ್ತನ್ನೇ ಒಂದು ಕುಟುಂಬವಾಗಿ ಮಾಡಿ ನಾವೆಲ್ಲ ಅಣ್ಣ ತಮ್ಮಂದಿರಂತೆ ಅಂತಃಕರಣಯುಕ್ತರಾಗಿ ಬದುಕುವುದು ನಿಜವಾದ ನಮ್ಮ ಚಿಂತನೆ. ಈ ಚಿಂತನೆ ಇದ್ದಾಗ ನಾವು ಜಗತ್ತನ್ನು ಮಾರುಕಟ್ಟೆಯಾಗಿಸುವ ಮಾತನಾಡುತ್ತಿರಲಿಲ್ಲ. ಭೋಗವಾದದಿಂದ ಜಗತ್ತನ್ನೇ ವಿನಾಶಕ್ಕೆ ತಳ್ಳಿಬಿಡುವ ಚರ್ಚೆ ಮಾಡುತ್ತಿರಲಿಲ್ಲ.
ಯಾವುದು ಎಂದಿಗೂ ಆಗಲೇಬಾರದೆಂಬ ಬಯಕೆ ನಮಗಿತ್ತೋ ಅದೇ ಈಗ ಆಗುತ್ತಿರುವುದು ದುರಂತ, ದೌರ್ಭಾಗ್ಯ! ಪ್ರಾಪಂಚಿಕತೆಯ ಹಿಂದೆ ಮನುಷ್ಯರನ್ನು ಅಟ್ಟಿ, ನಿಜವಾದ ಸುಖ-ಶಾಂತಿ-ನೆಮ್ಮದಿ ಕಳೆದುಕೊಳ್ಳುತ್ತಿರುವ ಜನರನ್ನು ಜಾಗತೀಕರಣ ಸೃಷ್ಟಿಸುತ್ತದೆ. ಹುಟ್ಟುವ ಪ್ರತಿಯೊಂದು ಮಗುವಿನ ತಂದೆ ತಾಯಿಯರೂ ಮುಂದೆ ಅದು ಸಾಫ್ಟ್ ವೇರ್ ಇಂಜಿನಿಯರ್ ಆಗಲೆಂದು ಬಯಸುತ್ತಾರೆ. ಹೀಗೆ ಇಂಜಿನಿಯರ್ ಆಗುವ ಬಯಕೆಯ ಹಿಂದೋಡುವ ಮುಖ್ಯ ಕಾರಣ ಡಾಲರ್ ಗಳೇ ಹೊರತು ಮತ್ತೇನಲ್ಲ. ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ದುಡಿಯುವ ಮಗ ಕೆಲಸಕ್ಕೆ ಸೇರಿದ ಕೆಲವೇ ತಿಂಗಳಲ್ಲಿ ಬದುಕುವ ಉತ್ಸಹವನ್ನೇ ಕಳೆದುಕೊಂಡುಬಿಡುತ್ತಾನೆಂಬುದನ್ನು ಗುರುತಿಸುವುದೇ ಇಲ್ಲ. ಅತ್ಯಂತ ಬುದ್ಧಿವಂತನಾದ, ಚುರುಕಾಗಿ ಕೆಲಸ ಮಾಡಬಲ್ಲ ಯುವಕರು, ಕೂಲಿ ಕಾರ್ಮಿಕರಂತೆ ಹೇಳಿದ್ದನ್ನು ಮಾಡುತ್ತಾ ಕೂರುವವರಾಗಿಬಿಡುತ್ತಾರಲ್ಲ, ಇದು ಜಾಗತೀಕರಣಾದ ದೊಡ್ಡ ಶಾಪ. ಇಷ್ಟಕ್ಕೂ ಆಶಿಷ್ಠ, ದೃಢಿಷ್ಠ, ಬಲಿಷ್ಠರಾಗಿರುವ ನಮ್ಮ ಯುವಕರು ಎ.ಸಿ. ಕೋಣೆಗಳಲ್ಲಿ ಕುಳಿತು ಮಾಡುವುದೇನು ಗೊತ್ತೇ? ಅಮೆರಿಕದ ಬ್ಯಾಂಕಿನ ವಹಿವಾಟುಗಳನ್ನು ಲೆಕ್ಕ ಇಡುವುದು, ಸೂಪರ್ ಬಜಾರುಗಳ ಬಿಲ್ಲಿಂಗ್ ವ್ಯವಸ್ಥೆ ನೋಡಿಕೊಳ್ಳುವುದು ಇಂಥದ್ದೇ ಕೆಲಸ. ಎಷ್ಟೋ ಇಂಜಿನಿಯರುಗಳಿಗೆ ತಾವೇನು ಕೆಲಸ ಮಾಡುತ್ತಿದ್ದೇವೆಂಬ ಅರಿವೇ ಇರದಂತಹ ವಿಷಮ ಪರಿಸ್ಥಿತಿ ಇದೆ. ಅಂದರೆ, ಮೂಕವಾಗಿ- ಪ್ರಶ್ನೆಗಳನ್ನೇ ಕೇಳದೆ ಕೆಲಸ ಮಾಡೋದಕ್ಕೆ ಐದಂಕಿ ಸಂಬಳ! ಇದರಿಂದಾಗಿ ಸಮಾಜದ ವ್ಯವಸ್ಥೆಯೇ ಕೆಟ್ಟು ಹೋಗಿದೆ. ಸೂಕ್ತ ಸಂಬಳ ದೊರೆಯದು ಎನ್ನುವ ಕಾರಣಕ್ಕೇ ಯುವಕರು ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುತ್ತಿಲ್ಲ. ವೈದ್ಯರಾಗುವುದನ್ನೂ ಧಿಕ್ಕರಿಸಿ ಸಾಫ್ಟ್ ವೇರ್ ಕ್ಷೇತ್ರವನ್ನು ಆರಿಸಿಕೊಳ್ಳುತ್ತಿದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಭೂಮಿಯ ಬೆಲೆ ಗಗನಕ್ಕೇರಿ, ಕೃಷಿ ಮಾಡಬೇಕಿಂದಿದ್ದ ರೈತ, ದಿನವಿಡೀ ಹೀಗೆ ಸುಮ್ಮನೆ ದುಡಿಯುವುದಕ್ಕಿಂತ ಭೂಮಿ ಮಾರುವುದೇ ಲೇಸು ಎಂದು ಚಿಂತಿಸುತ್ತಾನೆ. ಇದು, ಜಾಗತೀಕರಣದ್ದೇ ವಿಷ ಬೀಜ.
ಇಷ್ಟಕ್ಕೆ ಮುಗಿಯಲಿಲ್ಲ. ಹಣದ ಅಮಲಿಗೆ ಬಿದ್ದ ಯುವಕ- ಯುವತಿಯರಿಗೆ ಸಂಬಂಧಗಳೇ ಬೇಡವಾಗುತ್ತವೆ. ಬೆಂಗಳೂರಿನ ಯಾವುದೇ ಕೌನ್ಸಿಲಿಂಗ್ ಸೆಂಟರಿನೆದುರು ನಿಂತರೂ ನಿಮ್ಮ ಕಣ್ಣಿಗೆ ಬೀಳುವುದು ವಿಚ್ಛೇದನದ ಬಯಕೆ ಹೊತ್ತು ನಿಂತಿರುವ ಯುವ ಜೋಡಿಗಳು! ಅವರ ಮನೆಯಲ್ಲಿ ಹಬ್ಬ ಹರಿದಿನಗಳಿಲ್ಲ. ಕುಟುಂಬದೊಡನೆ ಮುಕ್ತವಾಗಿ ಬೆರೆಯಲು ಸಮಯವಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ದುಡಿದವರು ಶನಿವಾರ ಭಾನುವಾರಗಳಂದು ಮೈಮರೆತು ಕಾಲಕಳೆಯಬೇಕೆಂದು ಕಂಪೆನಿಗಳು ಬಯಸುತ್ತವೆ. ಹೀಗಾಗಿ ಆ ಎರಡು ದಿನ ಪಾರ್ಟಿಗಳಾಗುತ್ತವೆ, ಪಿಕ್ನಿಕ್ ಗಳಾಗುತ್ತವೆ. ಆಗತಾನೇ ಇಂಜಿನಿಯರಿಂಗ್ ಮುಗಿಸಿ ಬಂದ ಯುವಕ ಯುವತಿಯರಂತೂ ಝಗಮಗಿಸುವ ದುನಿಯಾದಲ್ಲಿ ಕಳೆದೇಹೋಗುತ್ತಾರೆ. ಮಾಯೆಯ ಬಲೆಯ ಪ್ರಭಾವ ಅವರನ್ನು ಸಂಸ್ಕೃತಿಯಿಂದ ಬಲುದೂರ ಕರೆದೊಯ್ದುಬಿಡುತ್ತದೆ.
ಇದಕ್ಕೆ ವ್ಯತಿರಿಕ್ತವಾದುದು ನಮ್ಮ ರೈತನ ಬವಣೆ. ಹಸಿರುಕ್ರಾಂತಿಯ ಆರಂಭದಲ್ಲಿ ಹೆಚ್ಚುಹೆಚ್ಚು ಬೆಳೆ ಎನ್ನುತ್ತಾ ಅವನ ಕೈಗೆ ರಸ ಗೊಬ್ಬರ ಕೊಟ್ಟೆವು, ಬೀಜವನ್ನಿತ್ತು, ಔಷದಿಯನ್ನೂ ಕೊಟ್ಟೆವು. ಆತನೂ ಎಲ್ಲವನ್ನು ಬಳಸಿದ. ಮೊದಲ ಕೆಲ ವರ್ಷ ಬೆಳೆಯೂ ಚೆನ್ನಾಗಿ ಬಂತು. ಈಗ ಔಷದಿಯ ಪ್ರಭಾವದಿಂದ ಭೂಮಿಯೂ ಬಂಜರಾಗಿ ಬೆಳೆ ತೆಗೆಯುವುದೆ ಕಷ್ಟವೆಂದ ಮೇಲೆ ಒಬ್ಬೊಬ್ಬರಾಗಿ ಸಾವಿಗೆ ಶರಣಾಗುತ್ತಿದ್ದಾರೆ. ಪಡೆದ ಸಾಲ ತೀರಿಸಲಾಗದೇ ನೇಣುಕುಣಿಕೆಗೆ ಕೊರಳೊಡ್ಡುವ ಸ್ಥಿತಿ ರೈತನಿಗೇಕೆ ಬಂತು? ನಾವೆಂದಾದರೂ ಯೋಚಿಸಿದ್ದೇವೆಯೇ?
ಒಂದು ಕಾಲದಲ್ಲಿ ಜಗದ ಧಾನ್ಯದ ಕಣಜವಾಗಿದ್ದ ನಮ್ಮ ನಾಡಿನ ೪೦ ಕೋಟಿ ಜನರು ದಿವಸಕ್ಕೆ ಒಮ್ಮೆ ಒಂದೇ ಹೊತ್ತಿನ ಊಟ ಮಾಡಲು ಶಕ್ತರು ಎಂಬ ವಿಚಾರ ಅರಿವಿದೆಯೇ? ಈ ದೇಶದ ಮುಕ್ಕಾಲು ಪಾಲು ಜನರಿಗೆ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಮಗಿನ್ನೂ ಸಾಧ್ಯವಾಗಿಲ್ಲ! ಒಂದೆಡೆ ಜಾಗತೀಕರಣದ ಜಾಗಟೆ ಬಾರಿಸುತ್ತಾ, ಏರುತ್ತಿರುವ ಸೆನ್ಸೆಕ್ಸನ್ನು, ಏರುತ್ತಿರುವ ಬಿಲಿಯನೇರುಗಳ ಸಂಖ್ಯೆಯನ್ನು ತೋರಿಸುತ್ತಿದ್ದೇವೆ. ಮತ್ತೊಂದೆಡೆ ಆತ್ಮಹತ್ಯೆಗೆ ಶರಣಾಗುವ ರೈತ , ಹಸಿವಿನಿಂದ ಕಂಗಾಲಾಗಿ ತನ್ನ ಮಕ್ಕಳನ್ನೇ ಕೊಂದು ನೆಮ್ಮದಿಯ ಸಾವು ಕಾಣುವ ತಾಯಿ. ಇವೆಲ್ಲ ಜಾಗತೀಕರಣದ ವೈಪರೀತ್ಯಗಳು.
ಜಾಗತೀಕರಣ ಮೇಲ್ನೋಟಕ್ಕೆ ಲಾಭ ಕೊಡುವುದು ಮೇಲ್ಪದರಕ್ಕೆ ಮಾತ್ರ. ಮೇಲ್ಪದರ ಅಂದರೆ ಹಾಲಿನ ಕೆನೆಯಿದ್ದಂತೆ. ಈ ಕೆನೆ ನಿರ್ಮಾಣವಾಗೋದು ಹಾಲಿನ ಸತ್ತ್ವವನ್ನು ಹೀರಿಕೊಂಡು. ಜಾಗತೀಕರಣದ ಲಾಭ ಪಡೆಯುತ್ತಿರುವ ಮೇಲ್ಪದರದ ನಿರ್ಮಾಣವೂ ಅಷ್ಟೇ…. ಹಳ್ಳಿಗಳ ಸತ್ತ್ವ ಹೀರಿಯೇ ಕೆನೆಯಾಗಿವೆ. ಈಗ ತಾವು ಪಡೆದ ಸತ್ತ್ವವನ್ನು ಹಂತಹಂತವಾಗಿ ಮರಳಿಸಿ ಜಾಗತೀಕರಣದ ಲಾಭ ಎಲ್ಲರಿಗೂ ದೊರೆಯುವಂತೆ ಮಾಡಬೇಕಾದ್ದು ನಮ್ಮದೇ ಕರ್ತವ್ಯ.
ಅದಾಗಲೇ ಬೆಂಗಳೂರಿನ ಅನೇಕ ಸಾಫ್ಟ್ ವೇರ್ ಉದ್ಯೋಗಿಗಳು ತಾವೇ ಒಂದು ತಂಡ ಕಟ್ಟಿಕೊಂಡು ದೂರದ ಬಳ್ಳಾರಿಯಲ್ಲಿ ಶಾಲೆ ನಡೆಸುತ್ತಿದ್ದಾರೆ. ಸಾಹಿತ್ಯ ಸಂವೇದನೆಯನ್ನು ಜೀವಂತವಾಗಿರಿಸಿಕೊಳ್ಳುವ ಮೂಲಕ ಆ ನಿಟ್ಟಿನಲ್ಲಿಯೂ ಹೊಸಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಾಲೇಜುಗಳಿಗೆ ಭೇಟಿಕೊಟ್ಟು ಸಾಫ್ಟ್ ವೇರ್ ಉದ್ಯೋಗಿಯಲ್ಲ, ಕಂಪೆನಿಯ ಒಡೆಯರಾಗಿ, ಜಗತ್ತಿಗೆ ಶಕ್ತಿ ತೋರಿಸಿ ಎಂಬ ಪಾಠ ಮಾಡುತ್ತಿದ್ದಾರೆ.
ಗಾಂಧೀಜಿಯ ಹಿಂದ್ ಸ್ವರಾಜ್ ನ ಕಲ್ಪನೆಗಳು ಇಂದಿಗೂ ಸೂಕ್ತವಾಗುವುದು ಅದಕ್ಕೇ. ೧೯೪೭ರಲ್ಲಿ ನೆಹರೂಗೆ ಪತ್ರ ಬರೆದ ಗಾಂಧೀಜಿ ” ನಾವೆಲ್ಲರೂ ವಾಸಿಸ ಬೇಕಾಗಿರುವುದು ಅರಮನೆಗಳಲ್ಲಲ್ಲ, ಬಂಗಲೆಗಳಲ್ಲಲ್ಲ, ಜಗತ್ತಿನ ಉದ್ಧಾರಕ್ಕೋಸ್ಕರ ನಾವು ಗ್ರಾಮಗಳಲ್ಲಿ ವಾಸಿಸುವುದನ್ನು ಕಲಿಯಬೇಕಿದೆ” ಎಂದಿದ್ದರು. ಆಧುನಿಕ, ನಾಗರಿಕ ಎನ್ನುವ ಹೆಸರಿನಲ್ಲಿ ನಾವು ಹಳ್ಳಿಯಿಂದ ದೂರವಾಗುತ್ತಿದ್ದೇವೆ. ಈ ನಾಡಿನ ಮಣ್ಣಿನಿಂದಲೂ ದೂರವಾಗುತ್ತಿದ್ದೇವೆ. ಉತ್ತರ ಕರ್ನಾಟಕದ ಜನರ ಚಿತ್ರ ನೋಡಿದ ಬೆಂಗಳೂರಿನ ಯುವಕ ಯುವತಿಯರು ’ಅಬ್ಬಾ! ಮಂಗಳ ಗ್ರಹದಿಂದ ಬಂದವರಂತೆ ಕಾಣುತ್ತಾರೆ’ ಎಂದು ಹೇಳಿದರೆ ಖಂಡಿತ ಅಚ್ಚರಿ ಪಡಬೇಡಿ. ಪರಿಸ್ಥಿತಿ ಹಾಗೆಯೇ ಇದೆ. ನಾವೆಲ್ಲ ಮೆಕಾಲೆ ಹೇಳಿದ ಕರಿಯ ಚರ್ಮದ ಆಂಗ್ಲರಾಗಿಬಿಟ್ಟಿದ್ದೇವೆ. ನಮ್ಮ ಆಲೋಚನೆಗಳು, ಚಿಂತನೆಗಳು, ಉಡುಗೆ ತೊಡುಗೆಗಳು, ಎಲ್ಲವೂ ಪಾಶ್ಚಿಮಾತ್ಯೀಕರಣಕ್ಕೊಳಗಾಗಿವೆ. ಈ ಭ್ರಮೆಯಿಂದ ಹೊರ ಬರದ ಹೊರತು ಸಮರ್ಥ ಭಾರತದ ನಿರ್ಮಾಣ ಅಸಾಧ್ಯವೇ ಸರಿ. ಬಾರತದ ಅಂತಃ ಸತ್ತ್ವವನ್ನು, ಆತ್ಮ ಶಕ್ತಿಯನ್ನು ಅರಿಯುವ ಪ್ರಯತ್ನ ನಾವು ಮಾಡಬೇಕಿದೆ. ’ನಾವು ಕುರಿಗಳಲ್ಲ, ಹುಲಿಗಳು’ ಎಂದು ವಿವೇಕಾನಂದರು ಅವತ್ತು ಹೇಳಿದ್ದರಲ್ಲ, ಅದು ಅಂದಿನಷ್ಟೇ ಇಂದಿಗೂ ಪ್ರಸ್ತುತ. ಜಾಗತೀಕರಣದ ಆಕ್ಟೋಪಸ್ ನಮ್ಮನ್ನು ತನ್ನ ಮುಷ್ಟಿಯಲ್ಲಿ ಸಿಕ್ಕಿಸಿಕೊಳ್ಳುವ ಮುನ್ನ ನಾವು ಜ್ಞಾನದ ಹಸ್ತ ಚಾಚಿ ಜಗತ್ತನ್ನು ಶಾಂತಿ ನೆಮ್ಮದಿಯತ್ತ ಕೊಂಡೊಯ್ಯಬೇಕಿದೆ,
ಸಧ್ಯದ ಮಟ್ಟಿಗೆ ಅದೇ ದೊಡ್ಡ ಸವಾಲು.

Posted in ನಮ್ಮ ನಮ್ಮ ನಡುವೆ | 2 Comments »

ಹೀಗೊಂದು ಹಸಿವಿನ ಕಥೆ…

Posted by Chakravarty on November 8, 2007

ನೆ ಹೊರಗೆ ಇಣುಕಿದರೆ ಕಾಣೋದು ಭಣ ಭಣ ನೆಲ.
ಒಳಗೂ ಸುಡು ಹಬೆ. ಮಳೆ ಹನಿ ಕಂಡು ನಾಲ್ಕು ವರ್ಷವಾದರೂ ದಾಟಿತ್ತು. ಊರಿನ ಎಲ್ಲರೂ ಈಗ ಚಾತಕ ಪಕ್ಷಿಗಳು.
ಮೊದಲು ಮನೆಯೊಡೆಯ ಮನೆ ಬಿಟ್ಟು ಹೊರಟ. ಪಟ್ಟಣದಲ್ಲಿ ದುಡಿದರೆ ನಾಲ್ಕು ಕಾಸು ಸಂಪಾದಿಸಿ ಮನೆಗೂ ಕಳಿಸಬಹುದು ಅಂತ!
ಆರೇ ತಿಂಗಳು. ಪಟ್ಟಣದ ಅಬ್ಬರದಿಂದ ಕಂಗೆಟ್ಟ. ವಾಪಸು ಬಂದರೆ ಕಿತ್ತು ತಿನ್ನುವ ಮನೆ.
ರೈಲು ಕಂಬಿಯ ಮೇಲೆ ಅಂಗಾತ ಬಿದ್ದ. ಪೋಲೀಸರು ಮಹಜರು ಮಾಡುವ ಗೋಜಿಗೂ ಹೋಗಲಿಲ್ಲ.

* * *

ಗಂಡನ ಶ್ರಮದ ಫಲಕ್ಕೆ ಕಾಯುತ್ತ ಕುಳಿತವಳು ಕಾಯುತ್ತಲೇ ಉಳಿದಳು. ಪುಟ್ಟವೆರಡು ಮಕ್ಕಳು ಕಣ್ಣೀರಿಟ್ಟವು. ಸ್ವಲ್ಪ ಹೆಚ್ಚು ಬರುವಂತಿದ್ದಿದ್ದರೆ ಅದನ್ನೇ ಕುಡಿಯಬಹುದಿತ್ತೋ ಏನೋ?
ಅವಳಿಗೆ ತಡೆಯಲಾಗಲಿಲ್ಲ. ಬಚ್ಚಲ ಬದಿಯಲ್ಲಿ ಬಿದ್ದಿದ್ದ ಮಡಕೆ ತಂದಳು. ಅಟ್ಟದ ಮೇಲೆ ಅದನ್ನು ಕಟ್ಟಿದಳು. ಇಬ್ಬರಿಗೂ ಅದನ್ನು ತೋರಿಸಿ, “ಗಂಜಿ ತುಂಬಿಸಿಟ್ಟಿದ್ದೇನೆ, ಹೊರಗೆ ಹೋಗಿ ಬಂದು ಕೊಡುತ್ತೇನೆ ” ಅಂದಳು.
ಪಾಪ ಮಕ್ಕಳಿಗೂ ಆಸೆಯ ಕಣ್ಣು. ಹೊರಗೆ ಹೋದ ಅಮ್ಮ ಬರುವವರೆಗೆ ಅದನ್ನೇ ನೋಡುತ್ತ ಕುಳಿತರು. ದೊಡ್ಡವಳು ಬುದ್ಧಿವಂತೆ. ತಮ್ಮನಿಗೆ ಗಂಜಿಯ ಕಥೆ ಹೇಳಿದಳು. ಅಕ್ಕಿ, ನೀರು ಎಲ್ಲ ಒಂದೊಂದಾಗಿ ವರ್ಣಿಸಿದಳು. ತಮ್ಮನೂ ಕಣ್ಣಗಲಿಸಿ ಕೇಳುತ್ತಿದ್ದ. ನೀರು ಅಂದಾಗ, ಅಕ್ಕಿ ಅಂದಾಗ ಅವನ ಒಣಗಿದ ನಾಲಗೆಯೂ ಚಿಗುರುತ್ತಿತ್ತು.

* * *

ಸಂಜೆಯಾಯ್ತು.
ದಿನವಿಡೀ ರಸ್ತೆ ಸವೆಸಿ ದೀನಳಾದ ಅಮ್ಮ ಜಗಲಿಯಲ್ಲಿ ಅಂಗಾತ ಬಿದ್ದಳು.
“ಅಮ್ಮಾ!!” ಚಿಕ್ಕವ ಓಡಿಬಂದ. ದೊಡ್ಡವಳು ಅಮ್ಮನನ್ನು ತಬ್ಬಿಕೊಂಡಳು. ಬೆಕ್ಕೊಂದು ಎತ್ತಲಿಂದಲೋ ಹಾರಿ ಬಂದು ಮಡಿಕೆ ಉರುಳಿಸಿತು. ಒಡೆದ ಮಡಿಕೆ ಮಕ್ಕಳ ಎದೆಯನ್ನೂ ಒಡೆಯಿತು.
ಮಡಕೆ ಚೂರು ನೋಡನೋಡುತ್ತಲೇ ಮಕ್ಕಳಿಬ್ಬರೂ ಖಾಲಿಯಾದರು. ಜೀವವೇ ಇಲ್ಲದ ದೇಹ ಖಾಲಿಯಲ್ಲವೇನು?

ಜಗಲಿಯಲ್ಲಿ ಮೂರು ಹೆಣಗಳು,
ಅನಾಥವಾಗಿಯೇ ಉಳಿದವು.

* * *

Posted in ಒಡಲಾಳದ ಕಥೆಗಳು | 7 Comments »