Posted by Chakravarty on May 23, 2008
ಟೀನಾ ಮತ್ತು ನೀಲಾಂಜನರು ‘ಕ್ರಿಸ್ತ ಮತ್ತು ಭಾರತ’ ಲೇಖನಕ್ಕೆ ಪ್ರತಿಕ್ರಿಯಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಪತ್ರಿಕೆಯಲ್ಲಿ ನಾನು ಬರೆದಿರೋದು ಏಸುಕ್ರಿಸ್ತನ ಬಗ್ಗೆ ನಡೆದ ಸಂಶೋಧನೆಯ ಕೇವಲ ಒಂದು ಭಾಗವಷ್ಟೇ. ಇದು ಪತ್ರಿಕೆಯ ಓದುಗರಿಂದಲೂ ಸಾಕಷ್ಟು ಉದ್ಗಾರ ಹೊರಡಿಸಿದೆ. ಆದರೆ ಇನ್ನೂ ಹೇಳಬೇಕಿರುವ ವಿಷಯಗಳು ಮತ್ತೆಷ್ಟು ಸಂಚಲನ ಉಂಟುಮಾಡಬಹುದೆಂದು ಯೋಚಿಸುತ್ತಿದ್ದೇನೆ.
ಇರಲಿ. ಗೆಳತಿ ಟೀನಾ ಹೇಳಿದ ಮೃತ ‘ಸಮುದ್ರದ ದಾಸ್ತಾವೆಜುಗಳು’ ಒಂದು ಕಾಲದಲ್ಲಿ ಜಗತ್ತನ್ನು ಅಲ್ಲಾಡಿಸಿದಂಥವು. ಅವುಗಳನ್ನಷ್ಟೆ ಆಧಾರವಾಗಿಟ್ಟುಕೊಂಡು ಅಧ್ಯಯನಕ್ಕೆ ಕುಳಿತರೆ ಏಸು ಎಂಬ ವ್ಯಕ್ತಿ ಅವತಾರವೆತ್ತಿದ್ದೇ ಸುಳ್ಳು ಎಂದಾಗುತ್ತದೆ. ಈ ಉತ್ಖನನದ ವರದಿ ಬರುವ ಮುನ್ನವೇ ವಿವೇಕಾನಂದರು ಈ ವಿಚಾರವಾಗಿ ಹೇಳಿರುವುದನ್ನು ಹೇಳುತ್ತೇನೆ.
ಯುರೋಪಿನಿಂದ ಭಾರತದೆಡೆಗೆ ಸ್ವಾಮೀಜಿ ಹೊರಟಾಗ ಒಂದೆಡೆ ಹಡಗಿನಲ್ಲಿ ಅವರಿಗೆ ಕನಸಾಯ್ತಂತೆ. ಅದರಲ್ಲಿ ಒಂದಷ್ಟು ಮಂದಿ ಥೇರಾಪುತ್ತರು (ಥೆರಾಪುಟ್ಸ್) “ಎದುರಿಗೆ ಕಾಣುವ ಕ್ರೀಟ್ ದ್ವೀಪದಲ್ಲಿದ್ದವರು ನಾವು. ಇಲ್ಲಿನ ವಿಚಾರಗಳನ್ನು ಸ್ವೀಕರಿಸಿ ಕ್ರೈಸ್ತಮತ ಬೆಳೆಯಿತು. ಇಂದಿನವರು ಹೇಳುತ್ತಿರುವ ‘ಏಸು’ ಎಂಬ ವ್ಯಕ್ತಿ ಇರಲೇ ಇಲ್ಲ” ಎಂದರಂತೆ. ತಕ್ಷಣ ಗಾಬರಿಗೊಂಡ ಸ್ವಾಮೀಜಿ ಹತ್ತಿರದ ದ್ವೀಪಗಳ ಬಗ್ಗೆ ಪ್ರಶ್ನಿಸಿದಾಗ, ಆ ಅಧಿಕಾರಿ ಬೆರಳು ತೋರಿಸುತ್ತ “ಅದು ಕ್ರೀಟ್ ದ್ವೀಪ” ಎಂದರಂತೆ!
(ಸ್ವಾಮಿ ಸೋಮನಾಥಾನಂದರು ಬರೆದಿರುವ ವಿವೇಕಾನಂದರ ಆತ್ಮ ಚರಿತ್ರೆ)
ಮುಂದೆ ಅದೇಭಾಗದಲ್ಲಿ ನಡೆದ ಉತ್ಖನನಗಳು ವಿವೇಕಾನಂದರ ಕನಸನ್ನು ಖಾತ್ರಿಗೊಳಿಸಿದವು.
ಹಾಗೆ ನೋಡಿದರೆ, ಜಗತ್ತಿನ ಎಲ್ಲ ಮತಗಳಿಗೂ ಮೂಲ ಭಾರತದ ಚಿಂತನೆಗಳೇ ಎಂಬುದರಲ್ಲಿ ಸಂಶಯವೇ ಇಲ್ಲ. ಮತ್ಸ್ಯ ಪುರಾಣದಲ್ಲಿ ಮೀನಾಗಿ ಅವತಾರವೆತ್ತಿ ಮನುಕುಲವನ್ನು ಉಳಿಸಿದ ಮಹಾವಿಷ್ಣು, ‘ನೋವಾ’ ಆಗಿ ಪಾಶ್ಚಾತ್ಯ ಕೃತಿಗಳಲ್ಲಿ ಕಂಡುಬರುತ್ತಾನೆ. ಕ್ರಿಶ್ಚಿಯನ್ನರ ಹಳೆಯ ಒಡಂಬಡಿಕೆಗಳ ಮೂಲ ಎಂದು ಹೇಳಲಾಗುವ ‘ಜೆಂಡ್ ಅವೆಸ್ತಾ’ದಲ್ಲಿ ‘ರಾಮ್ ಯಶ್ತ್’ ಎಂಬ ಒಂದು ಅಧ್ಯಾಯವಿದೆ. ಅದು ರಾಮನ ಕಥೆ. ಅಲ್ಲಿ ಸಾಕಷ್ಟು ಪ್ಯಾರಗಳಲ್ಲಿ ನಮ್ಮ ‘ಹನುಮಾನ್ ಚಾಲೀಸಾ’ದ ನೇರ ಅನುವಾದ ಅನ್ನಿಸುವ ವಿವರಗಳಿವೆ. ಯಜ್ಞಗಳ ಮೂಲಕ ಅಗ್ನಿಯನ್ನು ಪೂಜಿಸುವ ನಮ್ಮ ಚಿಂತನೆ ಯಾವ ಮತದಲ್ಲಿಲ್ಲ ಹೇಳಿ!?
ಏಸು ನಮ್ಮ ಪಾಲಿಗೆ ಒಬ್ಬ ಶ್ರೇಷ್ಟ ಸಂತ. ಶಿರಡಿಯ ಸಾಯಿ ಬಾಬಾ ಇಂಥಹದೇ ಶ್ರೇಷ್ಟ ಸಂತರಲ್ಲವೇ? ಅನಾರೋಗ್ಯ ಪೀಡಿತರನ್ನು ಗುಣಪಡಿಸಿದ, ನೀರಿಂದಲೇ ಬೆಂಕಿ ಹೊತ್ತಿಸಿದ ಅವರ ಪವಾಡಗಳು ಗೊತ್ತಿಲ್ಲವೇ? ದೇಹತ್ಯಾಗ ಮಾಡಿ ಮೂರುದಿನಗಳ ನಂತರ ಅವರು ಮತ್ತೆ ಮರಳಿದ್ದು, ಅದನ್ನು ಬ್ರಿಟಿಶ್ ಅಧಿಕಾರಿಯೊಬ್ಬ ಸಾಕ್ಷಿಯಾಗಿ ನಿಂತು ನೋಡಿದ್ದು ಜನಜನಿತ.
ಬಾಬಾ ಎಲ್ಲರಿಗೂ ಸತ್ಸಂಗ ದೊರಕಿಸಿಕೊಡಲು ಯತ್ನಿಸಿದರು. ಸದ್ವಿಚಾರಗಳನ್ನು, ಶಾಂತಿ- ಅಹಿಂಸೆಗಳನ್ನು ಬೋಧಿಸಿದರು.
ಕ್ರಿಸ್ತನೂ ಹಾಗೆಯೇ ಅಲ್ಲವೇ?
ಕಾಶ್ಮೀರದಲ್ಲಿ ಮಾರ್ತಾಂಡ ಮಂದಿರ ಎಂಬುದೊಂದಿದೆ. ಅಲ್ಲಿನ ಅವಶೇಷಗಳು ಕ್ರೈಸ್ತ ಧರ್ಮದ ಮೆಲೆ ಇಲ್ಲಿನ ತತ್ತ್ವಗಳ ಪ್ರಭಾವವನ್ನು ಸಾರಿಸಾರಿ ಹೇಳುತ್ತವೆ.
ಇನ್ನು, ಭವಿಷ್ಯ ಪುರಾಣದ ಬಗ್ಗೆ ಎತ್ತಿರುವ ಪ್ರಶ್ನೆಯೂ ಸಮಂಜಸವಾಗಿದೆ. ನನಗೂ ಮೊದಲು ಈ ಅನುಮಾನವಿತ್ತು. ಅದು ಮುಂದೆಂದೋ ಆಗಲಿದೆ ಎನ್ನುವುದನ್ನು ಹೇಳುವ ಕೃತಿಯಲ್ಲದೆ, ಆಗಿದ್ದನ್ನು ಹೇಳುವ ಕೃತಿಯೆಂದೇ ಇಟ್ಟುಕೊಳ್ಳಿ; ಆಗಲೂ ಏಸು ಭಾರತಕ್ಕೆ ಬಂದಿದ್ದುದು ಸತ್ಯ ಎಂದೇ ಸ್ಥಾಪಿತವಾಗುತ್ತದೆಯಲ್ಲವೆ?
ಸದ್ಯಕ್ಕೆ ನಾನು ಈ ನಿಟ್ಟಿನ ಅಧ್ಯಯನದಲ್ಲಿ ನಿರತನಾಗಿದ್ದೇನೆ. ಇನ್ನೆರಡು ತಿಂಗಳು ಅವಕಾಶ ಕೊಡಿ, ಸಮಗ್ರ ವಿವರಣೆಗಳೊಂದಿಗೆ ಒಂದು ಪುಸ್ತಕ ನಿಮ್ಮ ಕೈಲಿಡುತ್ತೇನೆ.
ವಂದೇ,
ಚಕ್ರವರ್ತಿ, ಸೂಲಿಬೆಲೆ
Posted in ನಮ್ಮ ನಮ್ಮ ನಡುವೆ | 1 Comment »
Posted by Chakravarty on February 18, 2008
ನಿಜಕ್ಕೂ ಫೆಬ್ರವರಿ ಹದಿನೇಳರ ಭಾನುವಾರದ ಸಂಜೆ ನನಗೆ ಅವಿಸ್ಮರಣೀಯವಾದ ಭಾವ ಜಾಗೃತಿಯ ಸಾರ್ಥಕ ಸಮಯವಾಗಿತ್ತು. ಅತ್ಯಂತ ಉಲ್ಲಾಸದಾಯಕವಾಗಿತ್ತು.
ಹೀಗೆ ನನ್ನನ್ನು ಆಳವಾಗಿ ತಟ್ಟಿದ ಕಾರ್ಯಕ್ರಮದ ಹೆಸರು- “ವಂದೇ ಮಾತರಂ ಗೀತ ಸಂಧ್ಯಾ”
ಮೈತ್ರಿ ಸಂಸ್ಕೃತಿ ಪ್ರತಿಷ್ಟಾನದ ಸಂಸ್ಕೃತೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ‘ಭಾರತ ವೈಭವ’ ಶೀರ್ಷಿಕೆಯಡಿಯಲ್ಲಿ ನಿರೂಪಣೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿತ್ತು.
ವಂದೇ ಮಾತರಂ
‘ವಂದೇ ಮಾತರಂ…’ ಈ ಎರಡು ಪದಗಳು ಸಾಕು ಮಿಂಚಿನ ಸಂಚಾರಕ್ಕೆ. ಯಾವ ಎರಡು ಪದಗಳನ್ನು ಉಚ್ಚ ಕಂಠದಲ್ಲಿ ಮೊಳಗಿಸುತ್ತ ಸಾವಿರಾರು ರಾಷ್ಟ್ರ ಪ್ರೇಮಿಗಳು ಹುತಾತ್ಮರಾದರೋ, ಲಕ್ಶಾಂತರ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಪಣ ತೊಟ್ಟೂ ನಿಂತರೋ ಅಂತಹ ಪ್ರೇರ್‍ಅಕ ರಣ ಮಂತ್ರ ಅದು!
ಬಹುಶಃ ನಿಮಗೆ ‘ವಂದೇ ಮಾತರಂ’ ಹುಟ್ಟಿದ ಬಗೆ ಗೊತ್ತಿರಬಹುದು.
ಖ್ಯಾತ ಕವಿ ಶ್ರೀ ಬಂಕಿಮ ಚಂದ್ರ ಚಟರ್ಜಿಯವರು ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ತಾಯಿ ಭಾರತಿಯೊಡಲಿನ ನಿಸರ್ಗ ಸೌಂದರ್ಯಕ್ಕೆ ಮಾರುಹೋದರು. ಜೊತೆಜೊತೆಗೆ ಆಕೆಗೊದಗಿದ ದುರ್ಗತಿಯನ್ನೂ, ಅದಕ್ಕೆ ಪ್ರತಿಯಾಗಿ ಧೀರಭಾರತೀಯರ ಹೋರಾಟವನ್ನೂನೆನೆಯುತ್ತ ಸಾಗಿದರು. ಅದರ ಪರಿಣಾಮ, ರಾತ್ರಿಯ ನಿದ್ರೆಯಲ್ಲೂ ಅವೆಅವೇ ಚಿತ್ರಣಗಳು. ಕನವರಿಕೆಯಲ್ಲಿ ಮೂಡಿಬಂದಿದ್ದು ‘ವಂದೇ ಮಾತರಂ’ ದಿವ್ಯಗೀತೆ!
ಬಂಕಿಮ ಚಂದ್ರರ ಸಂಬಂಧಿ ತರುಣನೊಬ್ಬ ಅವರು ಕನವರಿಸಿದ ಸಾಲುಗಳನ್ನು ಬರೆದುಕೊಂಡ. ಬಂಕಿಮ ಚಂದ್ರರು೮ ಎಚ್ಚರವಾದ ಬಳಿಕ ಅವರಿಗೆ ಅವನ್ನು ತೋರಿಸಿದ. ಸಂಭ್ರಾಂತರಾದ ಬಂಕಿಮಚಂದ್ರರು ಅದಕ್ಕೆ ಅಂತಿಮ ಸ್ಪರ್ಷ ನೀಡಿದರು. ಮುಂದೆ ಅವರ ಜನಪ್ರಿಯ ಕೃತಿ ‘ಆನಂದಮಠ’ದಲ್ಲಿ ಈ ಗೀತೆ ರಣ ಮಂತ್ರವಾಗಿ ಹರಿಯಿತು.
೧೯೦೫ರಲ್ಲಿ ಆಂಗ್ಲರು ಕೇಕು ಕತ್ತರಿಸಿದ ಹಾಗೆ ಬಂಗಾಳವಿಭಜನೆ ಮಾಡಹೊರಟಿದ್ದರಲ್ಲ, ಆಗ ಅದರ ವಿರುದ್ಧ ಹಿಂದೂ ಮುಸ್ಲಿಮರೆನ್ನದೆ ಎಲ್ಲರನ್ನೂ ಒಗ್ಗೂಡಿಸಿ ಹೋರಾಟಕ್ಕೆ ಹಚ್ಚಿದ್ದು ಈ ‘ವಂದೇ ಮಾತರಂ’ ಘೋಷ. ಬಂಗಾಳ ವಿಭಜನೆಯ ಮೂಲಕ ಯಾರ ನಡುವೆ ಬಿರುಕು ಮೂಡಿಸಬೇಕೆಂದು ಅವರು ಅಲೋಚಿಸಿದ್ದರೋ ಅದೇ ಹಿಂದೂ ಮುಸ್ಲಿಮರು ಜಾತಿ ಭೇದ ಮರೆತು ವಂದೇ ಮಾತರಂ ಘೋಷಣೇಯಡಿಯಲ್ಲಿ ಒಟ್ಟಾದರು, ಆಂಗ್ಲರ ಕುತಂತ್ರಕ್ಕೆ ಮಾರುತ್ತರ ನೀಡಿದರು!
ಬಿಡಿ. ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಸ್ಫೂರ್ತಿ ವಾಕ್ಯವಾಗಿ ಹರಿದುಬಂದು ರಾಷ್ಟ್ರ ಗೀತೆಯಾಗಬೇಕಿದ್ದ ‘ವಂದೇ ಮಾತರಂ’ಆ ಸ್ಥಾನಕ್ಕೆ ಆಯ್ಕೆಯಾಗದೆಹೋಗಿದ್ದು, “ಅದು ಪಾಶ್ಚಾತ್ಯರ ಬ್ಯಾಂಡ್ ಸೆಟ್ಟಿಗೆ ಹೊಂದೋಲ್ಲ” ಅನ್ನುವ ಕಾರಣಕ್ಕೆ! ಈ ಬಾಲಿಶ, ಅಸಹ್ಯಕರ ಕಾರಣ ನೀಡಿದವರ್ಯಾರು ಗೊತ್ತಾ? ನಮ್ಮ ದೇಶದ ಮೊದಲ ಪ್ರಧಾನಿ ಜವಹರ ಲಾಲ ನೆಹರೂ!!
ಕ್ಷಮಿಸಿ. ಹೇಳಹೊರಟಿದ್ದು ವಂದೇ ಮಾತರಂ ‘ಕಾರ್ಯಕ್ರಮ’ದ ಬಗ್ಗೆ.ಏನು ಮಾಡಲಿ? ಆ ದಿವ್ಯ ಮಂತ್ರ ಸ್ಮರಣೆಗೆ ಬಂದಾಗಲೆಲ್ಲ ಈ ವಿವರಗಳು ಹಿಂಬಾಲಿಸಿ ಬಂದುಬಿಡುತ್ತವೆ.
ಗೀತ ಸಂಧ್ಯಾ
ಶಂಕರ ಶಾನುಭಾಗ್ ಉತ್ತಮ ಸಂಸ್ಕಾರ ಹೊಂದಿರುವ ಸಹೃದಯಿ ಸಂಗೀತ ಕಲಾವಿದರು. ಅವರ ಕಂಠವನ್ನ ‘ಕಂಚಿನ ಕಂಠ’ ಎಂದರೆ ಕ್ಲೀಷೆಯಲ್ಲ ಅನ್ನೋದು, ಅವರ ವಿಶಿಷ್ಟ ಶೈಲಿಯ ವಂದೇ ಮಾತರಂ ಗೀತೆಯ ಗಾಯನದಲ್ಲೇ ಗೊತ್ತಾಗಿಹೋಗುತ್ತದೆ.
ಭಾವಾವಿಶ್ಟರಾಗಿ ಶಾನುಭಾಗ್ ‘ಹೂ ಹರೆಯದ ಹೊಂಗನಸುಗಳೇ… ಏಳಿ ಏಳೀ ಏಳಿ ಎಚ್ಚರಾಗಿ ಕನಸುಕಂಗಳೇ’ ಹಾಡುವಾಗ ಶ್ರೋತೃಗಳ ಮುಖದಲ್ಲಿನ ಹುಮ್ಮಸ್ಸು ನೋದಬೇಕು ನೀವು!
ಶಂಕರರ ತಂಡದಲ್ಲಿನ ಪ್ರತಿಯೊಬ್ಬ ಗಾಯಕ- ಗಾಯಕಿಯೂ ಹೀಗೇ. ಮನದುಂಬಿ, ಅಂತರಾಳದಿಂದ ಹಾಡುತ್ತರೆ. ರಾಷ್ಟ್ರಭಕ್ತಿಯ ಗೀತೆಗಳನ್ನು ಹಾಡುವಾಗ ಅಕ್ಷರಶಃ ಕಣ್ಣೀರುಮಿಡಿಯುತ್ತಾರೆ.
ಭಾನುವಾರದ ಸಂಜೆಯ ಈ ಸುಂದರ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಶಣೆಯಾಗಿದ್ದವರು ದಿವಂಗತ ಕರ್ನಲ್ ವಸಂತರ ತಾಯಿ ಮತ್ತು ಪತ್ನಿ. ಜೊತೆಗೆ, ವಯೋವೃದ್ಧರಾದ ನಿವೃತ್ತ ಕರ್ನಲ್ ಶ್ರೀ ಕಾತ್ಕರ್ ಅವರು.
“ನೀವೆಲ್ಲ ನಿಮ್ಮ ನಿಮ್ಮ ಕುಟುಂಬಕ್ಕಾಗಿ ದುಡಿಯುತ್ತೀರಿ. ಅಲ್ಲಿ ನಿಮ್ಮದೇ ಕುಟುಂಬದ ರಕ್ಷಣೆಗಾಗಿ ಯೋಧರು ಜೀವದ ಹಂಗು ತೊರೆದು ನಿಂತಿದ್ದಾರೆ. ಸದಾ ಇದನ್ನು ನೆನಪಿಡಿ. ದಯವಿಟ್ಟು ಯೋಧ ಕುಟುಂಬಗಳೊಡನೆ ಸಹಕರಿಸಿ ಮಾನವೀಯತೆ ತೋರಿ” ಎಂದು ವಿನಂತಿಸುತ್ತ ನಮಗೆ ನಮ್ಮ ಕರ್ತವ್ಯದ ಪಾಠ ಹೇಳಿದವರು ದಿ. ಕರ್ನಲ್ ವಸಂತರ ಪತ್ನಿ.
ಇನ್ನು, ಕರ್ನಲ್ ಕಾಟ್ಕರ್…
ಅವರಂತೂ ಕಾರ್ಯಕ್ರಮದ ಭಾವುಕ ವಾತಾವರಣದಲ್ಲಿ ಸಂಪೂರ್ಣ ಅಮಿಮರೆತಿದ್ದರು.
ಎಂಭತ್ತು ಮೀರಿದ ಈ ವಯಸ್ಸಿನಲ್ಲೂ ಅವರ ಚೀನಾ ಯುದ್ಧದ ಪ್ರತಿ ಕ್ಷಣಗಳು ತಾಜಾ ಆಗಿವೆ. ಅವುಗಳಾಲ್ಲಿ ಕೆಲವನ್ನು ಅವರು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಂಚಿಕೊಂಡರು.
ಕರ್ನಲ್ ಹೇಳಿದ ಒಂದು ಘಟನೆ…
“ಲಡಾಖ್ ನಲ್ಲಿ ಶೂನ್ಯಕ್ಕಿಂತ ಅತ್ಯಂತ ಕೆಳಗಿನ ಉಷ್ಣಾಂಶದಲ್ಲಿ ಮಂಜುಗಟ್ಟಿದ ವಾತಾವರಣಾಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆಯೂ ನಾವು ಚೀನೀಯರ ವಿರುದ್ಧ ಸೆಟೆದು ನಿಂತಿದ್ದೆವು. ನಮಮ್ ಪ್ಲಟೂನ್ ನಲ್ಲಿ ಪ್ರಮೋದ್ ಎನ್ನುವ ತೀರ ಚಿಕ್ಕ ವಯಸ್ಸಿನ ತರುಣ ಸೈನಿಕನಿದ್ದ. ಸದಾಚಟುವಟಿಕೆಯ ಆತ, ವಿಧವೆ ತಾಯಿಯ ಏಕಮಾತ್ರ ಮಗನಾಗಿದ್ದ.
ಅತ್ತ ನಾವು ಮರಗಟ್ಟಿಸುವ ಚಳಿಯಲ್ಲಿ ಹಗಲಿರುಳು ಬಂದೂಕು ಹಿಡಿದು ನಿಂತಿದ್ದಾಗ ಪ್ರಮೋದನ ತಾಯಿಯಿಂದ ಒಂದು ಪತ್ರ ಬಂದಿತು. ಪಾಪ, ಅವರು ಅದನ್ನು ಬರೆದು ಅದೆಷ್ಟು ದಿನವಗಿತ್ತೋ, ಹಿಮದ ಹಾದಿಯಲ್ಲಿ ನಡುಗುತ್ತ, ಕೊನೆಗೂ ಅದು ಅವನ ಕೈ ತಲುಪಿತ್ತು. ಆ ಹೊತ್ತಿಗಾಗಲೇ ಚೀನೀಯರು ನಮಗೆ ತೀರ ಹತ್ತಿರ ಬಂದುಬಿಟ್ಟಿದ್ದರು.
ಅಂತಹ ಉತ್ಕಟ ಕ್ಷಣದಲ್ಲಿ ಆ ತಾಯಿ ಬರೆದ ಸಾಲುಗಳು ಎಂಥವಿತ್ತು ಗೊತ್ತೇ?
“ಮಗೂ, ಚೀನೀಯರು ದೇಶದ ಗಡಿ ದಾಟಲಿದ್ದಾರೆಂದು ಸುದ್ದಿ ಇದೆ. ನೀನದಕ್ಕೆ ಬಿಡಕೂಡದು. ಹಾಗೇನಾದರೂ ಅವರು ದಾಟುವುದೇ ಆದರೆ, ಪ್ರಮೋದನ ಹೆಣದ ಮೇಲೆ ದಾಟಿಕೊಂಡು ಒಳಬರಬೇಕು!”
ನಮ್ಮ ಕೆಚ್ಚು ಹೆಚ್ಚಲಿಕ್ಕೆ ಇನ್ನೇನು ಬೇಕಿತ್ತು? ಕೂಡಲೆ ನಾವೆಲ್ಲ ಸೇರಿ ಆ ತಾಯಿಗೆ ಪತ್ರ ಬರೆದೆವು. “ಅಮ್ಮಾ, ಹಾಗೇನಾದರೂ ಚೀನೀಯರು ದೇಶದೊಳಕ್ಕೆ ನುಗ್ಗುವರೆನ್ನುವುದೇ ಆದರೆ, ಒಬ್ಬನಲ್ಲ, ಆರು ಪ್ರಮೋದರ ಹೆಣ ದಾಟಿ ಬರಬೇಕು. ಹೆದರಬೇಡ, ನಾವು ಜೀವದ ಹಂಗು ತೊರೆದು ಕಾದುತ್ತೇವೆ!”
~
ಹ್ಹ್! ನಮ್ಮ ನಮಮ್ ಕಲ್ಪನೆಯ ಸುಖದ ದ್ವೀಪಗಳಲ್ಲಿ ಬದುಕುತ್ತಿರುವ ನಮಗೆ, ದೇಶಕ್ಕಾಗಿ ಸಾಯೋದು ಅಂದರೇನು ಗೊತ್ತೇ?
ಬೇಡ. ದೇಶಕ್ಕಾಗಿ ಬದುಕಲಿಕ್ಕಾದರೂ….?
Posted in ನಮ್ಮ ನಮ್ಮ ನಡುವೆ | 11 Comments »
Posted by Chakravarty on January 6, 2008
ಸ್ವಾಮಿ ವಿವೇಕಾನಂದ! ಅದು ಬರಿಯ ಹೆಸರಲ್ಲ. ಅದೊಂದು ಶಕ್ತಿ. ಅಸೀಮ ಸ್ಫೂರ್ತಿ. ಅವರನ್ನು ಆಲಿಸುತ್ತ, ಅವರು ನಡೆದು ತೋರಿದ ದಾರಿಯಲ್ಲಿ ಹೆಜ್ಜೆಗಳನ್ನಿಡುತ್ತ ನಡೆದು ಬದುಕಿನ ಉನ್ನತ ಮಜಲುಗಳಿಗೇರಿದ ಯುವಕರ ಸಂಖ್ಯೆ ಅದೆಷ್ಟೋ… ಅದು ರಾಷ್ಟ್ರ ಪ್ರೇಮದ ಮಾತಾಗಿರಲಿ, ಸಮಾಜ ಸೇವಾ ಕ್ಷೇತ್ರವಿರಲಿ, ಅಥವಾ ಸಾಹಿತ್ಯ ಕ್ಷೇತ್ರವೇ ಆಗಿರಲಿ… ಎಲ್ಲೆಲ್ಲೂ ಹೊಸ ಹುಮ್ಮಸ್ಸಿನ ಅಲೆ ಎಬ್ಬಿಸುತ್ತ ಉತ್ಕೃಷ್ಟತೆಯ ಪತಾಕೆ ಹಾರಿಸುತ್ತ ಮೆರೆಯುವ ಏಕೈಕ ಹೆಸರು, ಸ್ವಾಮಿ ವಿವೇಕಾನಂದ.
ನಾವು ಮಾಡುವ ಯಾವುದೇ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ವಿವೇಕಾನಂದರ ಮಾತುಗಳು ಸಮರ್ಥ ಮಾರ್ಗದರ್ಶನ ನೀಡಬಲ್ಲವು. ಅವರಲ್ಲಿ ನಿರಾಶಾವಾದದ ಋಣಾತ್ಮಕ ಅಂಶವೇ ಇಲ್ಲ. ಎಂಥ ಪರಿಸ್ಥಿತಿಯಲ್ಲಿಯೂ ಸ್ವಾಮೀಜಿಯವರ ಮಾತು ಕೇಳಿದವನು ಚೈತನ್ಯದ ಚಿಲುಮೆಯಾಗಿಬಿಡುತ್ತಾನೆ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಸೋದರಿ ನಿವೇದಿತಾ, ನೇತಾಜಿ, ಅರವಿಂದರು, ಭಾಗಾ ಜತೀನ್, ಹೀಗೆ ಸಾಲು ಸಾಲು ಕ್ರಾಂತಿವೀರರು ವಿವೇಕಾನಂದರ ಪ್ರಖರ ತೇಜಸ್ಸಿನ ಸುಳಿಮಿಂಚಿಗೆ ಸಿಲುಕಿ ತಾವೂ ಧೃವತಾರೆಗಳಾದರು. ನಮ್ಮ ಕನ್ನಡದ ಕುವೆಂಪು ಅಂಥವರು ಸ್ವಾಮೀಜಿ ಚಿಂತನೆಗಳಿಂದ ಬಹಳ ಪ್ರಭಾವಿತರಾಗಿದ್ದರು. ಅವರ ಶಿಷ್ಯರಾದ ಜಿ. ಎಸ್. ಶಿವರುದ್ರಪ್ಪನವರೂ ಕೂಡ ವಿವೇಕಾನಂದರ ಮಾತುಗಳಿಂದ ಪ್ರಭಾವಿತರಾದವರೇ. ಇವರು ನಮ್ಮ ಕಣ್ಣಿಗೆ ಕಾಣುವ ಕನ್ನಡಿಗರಷ್ಟೇ. ಇನ್ನು ಇತರ ರಾಜ್ಯಗಳಲ್ಲಿ ಹೀಗೆ ಸ್ವಾಮೀಜಿ ವಿಚಾರ ಧಾರೆಗಳಿಂದ ಪ್ರಭಾವಿತರಾದ ಸಾಹಿತಿಗಳು ಅದೆಷ್ಟಿರುವರೋ? 
ಸಮಾಜ ಸೇವೆಯ ಕ್ಷೇತ್ರಕ್ಕೆ ಬಂದರೆ, ಸೋಲಿಗರ ನಡುವೆ ಕೆಲಸ ಮಾಡುವ, ಅವರಲ್ಲಿ ಬದುಕಿನ ವಿಶ್ವಾಸ ತುಂಬುತ್ತಿರುವ ಸುದರ್ಶನರು, ಹೆಗ್ಗಡೆದೇವನ ಕೋಟೆಯ ಬಾಲಸುಬ್ರಹ್ಮಣ್ಯರು, ಇವರೆಲ್ಲರ ಶಕ್ತಿಸ್ರೋತ ಸ್ವಾಮಿ ವಿವೇಕಾನಂದರೇ! ಇವರೂ ಕೂಡ ನಮ್ಮ ಸ್ಮರಣೆಗೆ ಥಟ್ಟನೆ ಬರುವ ವ್ಯಕ್ತಿಗಳು. ಇವರಂತೆ ಎಲೆ ಮರೆಯ ಕಾಯಿಗಳಾಗಿ ಸಮಾಜ ಸೇವೆಗೆ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಕಟಿ ಬದ್ಧರಾಗಿರುವವರು ಬಹಳ ಷ್ಟಿದ್ದಾರೆ. ಇಂದಿನ ಯುವಶಕ್ತಿ ದಾರಿತಪ್ಪಿದೆ ಎಂದೆಲ್ಲ ಹೇಳು ತ್ತೇವೆ, ಹೀಗೆ ಮಾರ್ಗಬಿಟ್ಟ ಯುವಕರನ್ನು ಮತ್ತೆ ಸರಿದಾರಿಗೆ ತರಲು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚುವುದು ಬಿಟ್ಟು ಬೇರೆ ಮಾರ್ಗವಿಲ್ಲ.
ದೇಶಾದ್ಯಂತ ಇರುವ ರಾಮಕೃಷ್ಣಾಶ್ರಮಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಅವುಗಳಲ್ಲಿ ನಮ್ಮ ಬೆಂಗಳೂರಿನ ಆಶ್ರಮವೂ ಮುಖ್ಯವಾದುದು. “ಸುಮ್ಮನೆ ನೋಡಲೆಂದು” ಬಂದ ಅದೆಷ್ಟೋ ಯುವಕರು ಇಲ್ಲಿನ ಪ್ರಶಾಂತ ವಾತಾವರಣದ ಪ್ರಭಾವಲಯಕ್ಕೆ ಒಳಗಾಗಿ ಆಂತರಿಕ ಪರಿವರ್ತನೆ ಪಡೆದು ಹೊರನಡೆದಿದ್ದಿದೆ. ಆಶ್ರಮ ನಡೆಸುತ್ತಿರುವ ವಿದ್ಯಾರ್ಥಿಗಳ ಹಾಸ್ಟೆಲ್- ವಿದ್ಯಾರ್ಥಿ ಮಂದಿರವಂತೂ ಸಾವಿರ ಸಾವಿರ ಸಂಖ್ಯೆಯ ಯುವಕರಿಗೆ ಆದರ್ಶದ ಪಥ ರೂಪಿಸಿಕೊಟ್ಟಿದೆ, ಬದುಕಿಗೊಂದು ಧ್ಯೇಯ ಕಲ್ಪಿಸಿಕೊಟ್ಟಿದೆ. ಇದೆಲ್ಲ, ಆಶ್ರಮದ ಪೂಜಾವೇದಿಯಲ್ಲಿ ಅಪಾರ ಕರುಣೆ ಹರಿಸುತ್ತ, ತಣ್ಣಗೆ ನಗುತ್ತ ಕುಳಿತಿರುವ ಪರಮಹಂಸರ ಕರುಣೆ. ಬಂದ ಮಕ್ಕಳಿಗೆಲ್ಲ ಇಲ್ಲಿ ತಾಯಿ ಮಡಿಲಿನಲ್ಲಿರುವಂಥ ಸುರಕ್ಷತೆಯ ಭಾವ. ಜನನಿ ಶಾರದಾಮಾತೆ ಹರಸಿದ ಸ್ಥಳವಲ್ಲವೇ ಇದು? ಇಲ್ಲಿ ಈ ಬಗೆಯ ಹತ್ತು ಹಲವು ವೈಶಿಷ್ಟ್ಯಗಳು.
ಶತಮಾನದ ಇತಿಹಾಸ ಕಂಡ ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮ ಸರಿಯುತ್ತಿರುವ ಕಾಲಕ್ಕೆ ಅಗತ್ಯವಿರುವಂತಹ ಕಾರ್ಯಕ್ರಮಗಳನ್ನು ರೂಪಿಸುತ್ತ, ಯುವ ಶಕ್ತಿ ಧನಾತ್ಮಕ ದಿಕ್ಕಿನಲ್ಲಿ ಹರಿಯುವಂತೆ ಮಾರ್ಗದರ್ಶನ ಮಾಡುತ್ತ, ಸ್ವಾಮೀಜಿಯವರ ಆಶಯವನ್ನು ಸಾಕಾರಗೊಳಿಸುತ್ತಿದೆ. ಭವ್ಯ ಭಾರತದ ನಿರ್ಮಾಣ ಕೇವಲ ಕನಸಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಇಂದಿನ ಪೀಳಿಗೆ ಬೌದ್ಧಿಕ ಚರ್ಚೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂಥದ್ದು.
ಬಸವನಗುಡಿಯಲ್ಲಿರುವ ರಾಮಕೃಷ್ಣಾಶ್ರಮ ಕಳೆದ ನೂರು ವರ್ಷದಿಂದ ಎಲ್ಲ ಬಗೆಯ ಜನರನ್ನು ಒಟ್ಟುಗೂಡಿಸುತ್ತ ಇಂಥದೊಂದು ಅವಕಾಶ ನೀಡುತ್ತ ಬಂದಿದೆ. ಮಾಡುತ್ತ ಬಂದಿದೆ. ರಾಮಕೃಷ್ಣ ಪರಮಹಂಸರು, ಶಾರದಾಮಾತೆಯರ ರೂಪದಲ್ಲಿ ಮುಮುಕ್ಷುಗಳಿಗೆ ಆಧ್ಯಾತ್ಮಿಕ ಸುಧೆ ಹರಿಸುತ್ತ, ಯುವಕರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತ ಬಲವಾಗಿ ನಿಂತಿದೆ. ಭಕ್ತ ಸಮ್ಮೇಳನಗಳು, ಯುವ ಸಮ್ಮೇಳನಗಳು ಈ ನಿಟ್ಟಿನಲ್ಲಿ ಸಾರ್ಥಕವಾದವುಗಳಂಥವು. ಪ್ರತಿ ವರ್ಷ ರಾಮಕೃಷ್ಣಾಶ್ರಮದಲ್ಲಿ ನಡೆಯುವ ರಾಮಕೃಷ್ಣ, ಶಾರದಾ ಮಾತೆ, ವಿವೇಕಾನಂದರ ಜಯಂತಿಯಂತೂ ಆಸ್ತಿಕರ, ಅಧ್ಯಯನಶೀಲರ ಗಮನ ಸೆಳೆಯುವಂಥವು. ಈ ಸಂಧರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನಗಳು, ಭಾವುಕರ ಮನಸೂರೆಗೊಂಡರೆ, ಆ ಸಂದರ್ಭದಲ್ಲಿನ ಪುಸ್ತಕಪ್ರದರ್ಶನ- ಮಾರಾಟ ವ್ಯವಸ್ಥೆ ಓದುಗರನ್ನ ಆಕರ್ಷಿಸುತ್ತದೆ. ಹೀಗೆ ಇಲ್ಲಿ ಹೃದಯಕ್ಕೂ ಆಹಾರ, ಬುದ್ಧಿಗೂ ಆಹಾರ. ರಾಮ ಕೃಷ್ಣರ, ಶ್ರೀಮಾತೆಯವರ, ವಿವೇಕಾನಂದರ ಮತ್ತು ರಾಮಕೃಷ್ಣ ಶಿಷ್ಯ ಪರಂಪರೆಯ ಅನೇಕಾನೇಕ ಸಂತರ ಜೀವನ ಚರಿತ್ರೆಗಳು, ಸ್ತೋತ್ರ ಮಾಲಿಕೆಗಳು, ಆಧ್ಯಾತ್ಮಿಕ ಜೀವನದಲ್ಲಿ ದಾರಿದೀವಿಗೆಗಳಾಗಬಲ್ಲ ಅದೆಷ್ಟೋ ಪುಸ್ತಕಗಳು ಈ ಪ್ರದರ್ಶನದಲ್ಲಿ ಸುಲಭ ಬೆಲೆಗೆ ದಕ್ಕುತ್ತವೆ.
ಅಂದಹಾಗೆ, ಜನವರಿ ೧ರಿಂದ ೧೫ರವರೆಗೆ ರಾಮಕೃಷ್ಣಾಶ್ರಮದಲ್ಲಿ ಪುಸ್ತಕ ಪ್ರದರ್ಶನವೇರ್ಪಡಿಸಲಾಗಿದೆ. ಈ ಸಂದರ್ಭವನ್ನು ಯಥೋಚಿತವಾಗಿಬಳಸಿಕೊಂಡು ಅದರ ಲಾಭ ಪಡೆಯಲು, ಆ ಮೂಲಕ ನಮ್ಮ ಅರಿವಿನ ಹಸಿವನ್ನು ನೀಗಿಕೊಳ್ಳಲು ಇದೊಂದು ಸುವರ್ಣಾವಕಾಶ.
Posted in ನಮ್ಮ ನಮ್ಮ ನಡುವೆ | No Comments »
Posted by Chakravarty on December 1, 2007
ಇವತ್ತಿನ ಸುದ್ದಿ ಕೇಳಿದಿರಾ?
ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಏಯ್ಡ್ಸ್ ರೋಗಿಗಳಿಗೆ ಕೊಡುವ ಔಷಧದಲ್ಲಿ ಹೇರಾಫೇರಿ ನಡೆಯುತ್ತಿದೆ. ವಿದೇಶೀ ಔಷಧ ಕಂಪೆನಿಗಳ ಎಕ್ಸ್ ಪೆರಿಮೆಂಟಿಗೆ ನಮ್ಮ ಜನರು ಬಲಿಪಶುಗಳಾಗ್ತಿದಾರೆ.
ಮೊನ್ನೆ ’ಔಷಧ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಜೀವಗಳು’ ಲೇಖನವನ್ನೋದಿದ ಕೆಲವು ಪರಿಚಿತರು, “ನೀವು ಹೇಳುವಷ್ಟೆಲ್ಲ ಕುಲಗೆಟ್ಟುಹೋಗಿಲ್ಲ ಬಿಡ್ರಿ! ಸುಮ್ನೆ ಎಲ್ಲಾವ್ದನ್ನೂ ಎಕ್ಸಾಸಿರೇಟ್ ಮಾಡ್ತೀರ” ಅಂದುಬಿಟ್ಟಿದ್ದರು. ಆಗ ನಾನು ತೀರ ನನ್ನ ಸುತ್ತ ಮುತ್ತಲೇ ನಡೆದ ಕೆಲವು ಘಟನೆಗಳನ್ನ ಹೇಳಿ ವಿಷಯದ ಗಂಭೀರತೆಯನ್ನ ಮನದಟ್ಟು ಮಾಡಿಸಬೇಕಾಯ್ತು. ಮತ್ತಿವತ್ತು ಬಂದಿದೆ ಈ ಆಘಾತಕಾರಿ ಸುದ್ದಿ.
ಖಾಸಗಿ ವೈದ್ಯರದೊಂದು ರೀತಿಯ ಹಗಲು ದರೋಡೆಯಾದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತೊಂದು ಬಗೆಯ ಕಳ್ಳತನ.
ಒಂದು ವರ್ಷದ ಹಿಂದಿನ ಮಾತು. ನನ್ನ ಊರು ಹೊನ್ನಾವರದಲ್ಲಿ, ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯ ರೋಗಕ್ಕೆ ಮಾತ್ರೆಗಳನ್ನ ಹಂಚುತ್ತಿದ್ದರು. ಪಾಪ ಊರ ಜನ ತುಂಬ ಶ್ರದ್ಧೆಯಿಂದ ಅದನ್ನು ತೆಗೆದುಕೊಳ್ಳುತ್ತಿದ್ದರು.
ವಾರ, ತಿಂಗಳು… ಊಹೂಂ… ಎಷ್ಟು ದಿನ ಕಾದರೂ ಫಲಿತಾಂಶ ಮಾತ್ರ ಸೊನ್ನೆ!
ಆ ಊರಿನ ಒಬ್ಬ ಕುತೂಹಲಿ ಯುವಕ ಆ ಕ್ಯಾಪ್ಸೂಲನ್ನು ಸುಮ್ಮನೆ ನುಂಗದೆ, ಅದನ್ನ ಬಿಚ್ಚಿ ನೋಡಿದ. ಅದರಲ್ಲೇನಿತ್ತು ಮಣ್ಣು!? ಪೂರ್ತಿ ಖಾಲಿ!!
ಊರವರೆಲ್ಲ ಸೇರಿದರು. ಆಸ್ಪತ್ರೆಯಲ್ಲಿದ್ದ ಅಷ್ಟೂ ಕ್ಷಯದ ಮಾತ್ರೆಗಳನ್ನ ನೋಡಲಾಯ್ತು. ಎಲ್ಲವೂ ಹಾಗೇ ಖಾಲಿ ಖಾಲಿಯಾಗಿ ಬಾಯಿ ಕಳೆದುಕೊಂಡುಬಿದ್ದಿದ್ದವು!
ಅಷ್ಟೂ ದಿನ ನಂಬಿಕೆಯಿಂದ ಮಾತ್ರೆಗಳನ್ನ ನುಂಗಿದ್ದ ಜನರಿಗೆ ಎಂಥ ಆಘಾತವಾಗಿರಬೇಡ ಹೇಳಿ?
ಮತ್ತೊಂದು ಇಂಥದೇ ಕೇಸು. ಇದನ್ನ, ಲೇಖನ ಓದಿದ ನನ್ನ ಗೆಳೆಯ ರಾಜೇಶ ಹೇಳಿದ್ದು.
ಆತನ ಅಕ್ಕನಿಗೆ ಹೊಟ್ಟೆ ನೋವು ಅಂತ ದೊಡ್ಡ ನರ್ಸಿಂಗ್ ಹೋಮ್ ಒಂದಕ್ಕೆ ಕರೆದುಕೊಂಡು ಹೋಗಿದ್ದರು. ಸ್ಕ್ಯಾನ್ ಮಾಡಿ ಅವರನ್ನ ಹೊರಗೆ ಹತ್ತು ನಿಮಿಷ ಕಾಯಿಸಿ, ’ಅಪೆಂಡಿಸೈಟಿಸ್’ ಅಂತ ರಿಪೋರ್ಟು ಕೊಟ್ಟರು. ಆಪರೇಷನ್ನೇ ಗತಿ! ಮಗು ಇನ್ನೂ ಸಣ್ಣದು. ನೋಡೀಕೊಳ್ಳೋರ್ಯಾರು?
ರಾಜೇಶ ಕೊಂಚ ತಲೆ ಓಡಿಸಿ, ಇನ್ನೂ ಆರಂಭದ ಹಂತದ್ದಾದ್ದರಿಂದ ಸಧ್ಯಕ್ಕೆ ಆಪರೇಷನ್ನು ಬೇಡವೆಂದ. ಮತ್ತೆ ನೋವು ಹೆಚ್ಚಾದರೆ ಆಸ್ಪತ್ರೆಗೆ ಬರುವುದು ಅಂದುಕೊಂಡು ಮನೆ ದಾರಿ ಹಿಡಿದರು.
ಅದಾಗಿ ಒಂದೆರಡು ತಿಂಗಳು ಆಕೆಗೆ ಹೊಟ್ಟೆ ನೋವು ಬರಲೇ ಇಲ್ಲ. ಮತ್ತೊಮ್ಮೆ ರಾಜೇಶ ಮನೆ ಬಳಿಯ ವೈದ್ಯರ ಹತ್ತಿರ ಆಕೆಯನ್ನ ಕರೆದುಕೊಂಡು ಹೋಗಿ ಅಪೆಂಡಿಕ್ಸ್ ಯಾವ ಹಂತದಲ್ಲಿದೆ ಎಂದು ವಿಚಾರಿಸಿದರೆ, ಅವರು ಅಚ್ಚರಿಪಟ್ಟುಬಿಟ್ಟರು. ಅಸಲಿಗೆ ಆಕೆಗೆ ಅಪೆಂಡಿಕ್ಸ್ ಇಲ್ಲವೇ ಇಲ್ಲವೆಂದೂ, ಯಾರದೋ ರಿಪೋರ್ಟ್ ಅವರಿಗೆ ತೋರಿಸಲಾಗಿದೆಯೆಂದೂ ಆ ವೈದ್ಯರು ಹೇಳಿದಾಗ ಅಚ್ಚರಿಯಾಗುವ ಸರದಿ ರಾಜೇಶ ಮತ್ತವನ ಅಕ್ಕನದು! ಈ ಒಟ್ಟು ಘಟನೆ ನಡೆದು ಆರು ವರ್ಷಗಳಾಗಿವೆ. ರಾಜೇಶನ ಅಕ್ಕ, ಒಂದಷ್ಟು ಗ್ಯಾಸ್ಟ್ರಿಕ್ ಸಮಸ್ಯೆ ಹೊರತುಪಡಿಸಿದರೆ, ಆರಾಮಾಗಿಯೇ ಇದ್ದಾರೆ!
ದೊಡ್ಡ ಆಸ್ಪತ್ರೆಯ ಡಾಕ್ಟ್ರುಗಳನ್ನ ನೆಚ್ಚಿಕೊಂಡು ಆಪರೇಷನ್ನಿಗೆ ಸಮ್ಮತಿಸಿದ್ದರೆ, ಏನೂ ಸಮಸ್ಯೆಯಿಲ್ಲದ ಹೊಟ್ಟೆ ಕೊಯ್ದು ಅವರೇನು ಮಾಡುತ್ತಿದ್ದರು?
ಕಿಡ್ನಿ ಕದಿಯುತ್ತಿದ್ದರೇ? ಅರಿವಳಿಕೆ ಕೊಟ್ಟು ಮಲಗಿಸಿ……!? ಅಥವಾ ಓ.ಟಿ. ಒಳಗೆ ಕರೆದೊಯ್ದು ತಮ್ಮ ಪಾಡಿಗೆ ತಾವು ಟೈಂ ಪಾಸ್ ಮಾಡಿ ಹೊರಬರುತ್ತಿದ್ದರೆ? ಯಾರು ಉತ್ತರಿಸುವರು ಹೇಳಿ? ವೈದ್ಯರು ಯಾಕೆ ಹೀಗೆ ಮಾಡ್ತಾರೆ? ಕಂಡವರ ಜೀವಕ್ಕೆ, ಅವರ ದುಡ್ಡಿಗೆ ಬೆಲೆಯೇ ಇಲ್ವಾ?
ಹಾಗಂತ ವೈದ್ಯರೆಲ್ಲ ಕೆಟ್ಟವರು, ಅಂತ ನಾನು ಹೇಳ್ತಿಲ್ಲ. ವೈದ್ಯ ವೃತ್ತಿಗೊಂದು ಘನತೆ ತಂದುಕೊಟ್ಟು ಮಾನವೀಯತೆ ಮೆರೆಯುತ್ತಿರುವ ಸಾಕಷ್ಟು ಜನರು ನಮ್ಮೊಂದಿಗಿದ್ದಾರೆ. ಅವರ ಬಗ್ಗೆ ಮತ್ತೆಂದಾದರೂ ಹೇಳುವೆ. ಆದರೆ ಅಂಥವರ ಸಂಖ್ಯೆ ಬೆರಳೆಣಿಕೆಯಷ್ಟು ಎನ್ನುವುದೇ ಖೇದದ ಸಂಗತಿ.
ಇವತ್ತಿನ ಪತ್ರಿಕೆಯಲ್ಲೊಂದು ಮತ್ತೊಂದು ಸುದ್ದಿ. ಗ್ರಾಮೀಣ ಸೇವೆ ಕಡ್ಡಾಯ ವಿರೋಧಿಸಿ ವೈದ್ಯ ವಿದ್ಯಾರ್ಥಿಗಳು ಧರಣಿ ಮಾಡಿದ ಕುರಿತು… ಅದಕ್ಕೆ ಪ್ರತಿಕ್ರಿಯೆ ಕೂಡ ನೀಡಲಾಗದಷ್ಟು ಮನಸ್ಸು ಮುರಿದುಹೋಗಿದೆ. ವೈದ್ಯಕೀಯ ಸೇವೆ ಅನ್ನುವುದು, ಹಣ ಮಾಡುವ ದಂಧೆಯಾಗಿದ್ದು ಯಾವಾಗ?
ಇರಲಿ. ಇವತ್ತು ನಾನು ಮತ್ತೆ ಇವೆಲ್ಲವನ್ನೂ ಬರೆಯಲು ಕಾರಣವಿದೆ.
ಹಿಂದಿನ ಲೇಖನದಲ್ಲಿ ನಾನು ಉಲ್ಲೇಖಿಸಿದ್ದ ನನ್ನ ಪ್ರೀತಿಯ ಮೇಷ್ಟ್ರು ನಮ್ಮನ್ನಗಲಿ ಹೋಗಿಬಿಟ್ಟರು.
ಆಪರೇಷನ್ನು, ಅದಕ್ಕೆ ದುಡ್ಡು ಹೊಂದಿಸುವ ಪೀಕಲಾಟ, ಜೀವ ಬಾಯಿಗೆ ತರುವ ಬಿಕ್ಕಳಿಕೆ… ಇವೆಲ್ಲವನ್ನೂ ಬಿಟ್ಟು ನಡೆದುಬಿಟ್ಟರು. ಒಂದು ತಿಂಗಳ ಅವಧಿಯಲ್ಲಿ ನಡೆದ ಈ ದುರಂತಕ್ಕೆ ಅವರ ಕುಟುಂಬ ಭರಿಸಿದ್ದು (ವ್ಯಯಿಸಿದ್ದು ಅನ್ನದೆ ವಿಧಿ ಇಲ್ಲ) ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿಗಳು!
ಈಗ ತಾನೇ ಅವರ ಅಂತ್ಯ ಸಂಸ್ಕಾರ ಮುಗಿಸಿ ಬಂದೆ. ನಿಮ್ಮೆದುರು ನೋವು ಹಂಚಿಕೊಳ್ಳಬೇಕನಿಸಿತು. ಅಷ್ಟೇ…
Posted in ನಮ್ಮ ನಮ್ಮ ನಡುವೆ | 1 Comment »
Posted by Chakravarty on November 11, 2007
ಬಲು ಹಳೆಯ ಕತೆ. ಒಬ್ಬ ಕುರುಡ ಮತ್ತೊಬ್ಬ ಕುಂಟನ ಕತೆ. ಒಮ್ಮೆ ಇಬ್ಬರೂ ನಿರ್ಧಾರ ಮಾಡುತ್ತಾರೆ. ಕುರುಡ ಕುಂಟನನ್ನು ಹೆಗಲ ಮೆಲೆ ಕೂರಿಸಿಕೊಳ್ಳುತ್ತಾನೆ. ಕುಂಟ ದಾರಿ ತೋರುತ್ತಾನೆ, ಕುರುಡ ದಾರಿ ಸವೆಸುತ್ತಾನೆ. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಇಬ್ಬರೂ ಹೊಟ್ಟೆ ತುಂಬಿಸಿಕೊಳ್ಳತೊಡಗುತ್ತಾರೆ. ಇದೆಲ್ಲ ಮೊದ ಮೊದಲು ಚೆನ್ನಾಗಿಯೇ ನಡೆದಿತ್ತು. ಬರಬರುತ್ತಾ ಕುಂಟ ಸ್ವಾರ್ಥಿಯಾಗತೊಡಗಿದ. ಭಿಕ್ಷೆಯಲ್ಲಿ ದೊರೆತ ಒಳ್ಳೆಯ ಪದಾರ್ಥಗಳನ್ನು ತಾನು ತಿಂದು, ಹಳಸಿದ, ಅಯೋಗ್ಯ ಆಹಾರವನ್ನು ಕುರುಡನಿಗೆ ಕೊಡತೊಡಗಿದ. ಹೇಗೂ ಕಣ್ಣು ಕಾಣದಲ್ಲ!? ಇತ್ತ ಕುಂಟ ಚೆನ್ನಾಗಿ ತಿಂದುಂಡು ಬಲಿಷ್ಟನಾದರೆ, ಅತ್ತ ಕುರುಡ ಸತ್ವ ಹೀನನಾಗಿ ಕೃಶನಾಗುತ್ತಾ ಸಾಗಿದ.

ಈ ಕಥೆ ನಮ್ಮ ದೇಶಕ್ಕೆ ಹೊಂದುವ ಮಾತು. ಕತೆಯ ಕುಂಟ ಇಂಡಿಯಾ, ಕುರುಡ ಭಾರತ! ಜಾಗತೀಕರಣದ ಸೌಲಭ್ಯ, ಸವಲತ್ತುಗಳನ್ನು ಪಡೆದು ಕೊಬ್ಬಿ ಬೆಳೆಯುತ್ತಿರುವ ಇಂಡಿಯಾ ಸವಾರಿ ಮಾಡುತ್ತಿರುವುದು, ಅದರ ದುಷ್ಪರಿಣಾಮ ಉಣ್ಣುತ್ತಿರುವ ಭಾರತದ ಮೇಲೆ!
ಜಾಗತೀಕರಣ ಅಂದ್ರೆ, ಇಡಿಯ ಜಗತ್ತನ್ನೇ ಒಂದು ಹಳ್ಳಿಯಾಗಿಸುವ ಒಂದು ಪ್ರಕ್ರಿಯೆ. ’ಗ್ಲೋಬಲ್ ವಿಲೇಜ್’ ಅನ್ನುವ ಮಾತು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ನಮ್ಮಲ್ಲಿ ಬಹುತೇಕರಿಗೆ ಗೊತ್ತಿಲ್ಲ, ಜಾಗತೀಕರಣದ ನಮ್ಮ ಕಲ್ಪನೆ ಇನ್ನೂ ವಿಶಾಲ, ಆಳ. ಜಗತ್ತು ಹಳ್ಳಿಯ ಮಾತಾಡಿದರೆ, ನಾವು ಕುಟುಂಬದ ಮಾತಾಡುತ್ತೇವೆ. ಜಗತ್ತನ್ನೇ ಒಂದು ಕುಟುಂಬವಾಗಿ ಮಾಡಿ ನಾವೆಲ್ಲ ಅಣ್ಣ ತಮ್ಮಂದಿರಂತೆ ಅಂತಃಕರಣಯುಕ್ತರಾಗಿ ಬದುಕುವುದು ನಿಜವಾದ ನಮ್ಮ ಚಿಂತನೆ. ಈ ಚಿಂತನೆ ಇದ್ದಾಗ ನಾವು ಜಗತ್ತನ್ನು ಮಾರುಕಟ್ಟೆಯಾಗಿಸುವ ಮಾತನಾಡುತ್ತಿರಲಿಲ್ಲ. ಭೋಗವಾದದಿಂದ ಜಗತ್ತನ್ನೇ ವಿನಾಶಕ್ಕೆ ತಳ್ಳಿಬಿಡುವ ಚರ್ಚೆ ಮಾಡುತ್ತಿರಲಿಲ್ಲ.
ಯಾವುದು ಎಂದಿಗೂ ಆಗಲೇಬಾರದೆಂಬ ಬಯಕೆ ನಮಗಿತ್ತೋ ಅದೇ ಈಗ ಆಗುತ್ತಿರುವುದು ದುರಂತ, ದೌರ್ಭಾಗ್ಯ! ಪ್ರಾಪಂಚಿಕತೆಯ ಹಿಂದೆ ಮನುಷ್ಯರನ್ನು ಅಟ್ಟಿ, ನಿಜವಾದ ಸುಖ-ಶಾಂತಿ-ನೆಮ್ಮದಿ ಕಳೆದುಕೊಳ್ಳುತ್ತಿರುವ ಜನರನ್ನು ಜಾಗತೀಕರಣ ಸೃಷ್ಟಿಸುತ್ತದೆ. ಹುಟ್ಟುವ ಪ್ರತಿಯೊಂದು ಮಗುವಿನ ತಂದೆ ತಾಯಿಯರೂ ಮುಂದೆ ಅದು ಸಾಫ್ಟ್ ವೇರ್ ಇಂಜಿನಿಯರ್ ಆಗಲೆಂದು ಬಯಸುತ್ತಾರೆ. ಹೀಗೆ ಇಂಜಿನಿಯರ್ ಆಗುವ ಬಯಕೆಯ ಹಿಂದೋಡುವ ಮುಖ್ಯ ಕಾರಣ ಡಾಲರ್ ಗಳೇ ಹೊರತು ಮತ್ತೇನಲ್ಲ. ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ದುಡಿಯುವ ಮಗ ಕೆಲಸಕ್ಕೆ ಸೇರಿದ ಕೆಲವೇ ತಿಂಗಳಲ್ಲಿ ಬದುಕುವ ಉತ್ಸಹವನ್ನೇ ಕಳೆದುಕೊಂಡುಬಿಡುತ್ತಾನೆಂಬುದನ್ನು ಗುರುತಿಸುವುದೇ ಇಲ್ಲ. ಅತ್ಯಂತ ಬುದ್ಧಿವಂತನಾದ, ಚುರುಕಾಗಿ ಕೆಲಸ ಮಾಡಬಲ್ಲ ಯುವಕರು, ಕೂಲಿ ಕಾರ್ಮಿಕರಂತೆ ಹೇಳಿದ್ದನ್ನು ಮಾಡುತ್ತಾ ಕೂರುವವರಾಗಿಬಿಡುತ್ತಾರಲ್ಲ, ಇದು ಜಾಗತೀಕರಣಾದ ದೊಡ್ಡ ಶಾಪ. ಇಷ್ಟಕ್ಕೂ ಆಶಿಷ್ಠ, ದೃಢಿಷ್ಠ, ಬಲಿಷ್ಠರಾಗಿರುವ ನಮ್ಮ ಯುವಕರು ಎ.ಸಿ. ಕೋಣೆಗಳಲ್ಲಿ ಕುಳಿತು ಮಾಡುವುದೇನು ಗೊತ್ತೇ? ಅಮೆರಿಕದ ಬ್ಯಾಂಕಿನ ವಹಿವಾಟುಗಳನ್ನು ಲೆಕ್ಕ ಇಡುವುದು, ಸೂಪರ್ ಬಜಾರುಗಳ ಬಿಲ್ಲಿಂಗ್ ವ್ಯವಸ್ಥೆ ನೋಡಿಕೊಳ್ಳುವುದು ಇಂಥದ್ದೇ ಕೆಲಸ. ಎಷ್ಟೋ ಇಂಜಿನಿಯರುಗಳಿಗೆ ತಾವೇನು ಕೆಲಸ ಮಾಡುತ್ತಿದ್ದೇವೆಂಬ ಅರಿವೇ ಇರದಂತಹ ವಿಷಮ ಪರಿಸ್ಥಿತಿ ಇದೆ. ಅಂದರೆ, ಮೂಕವಾಗಿ- ಪ್ರಶ್ನೆಗಳನ್ನೇ ಕೇಳದೆ ಕೆಲಸ ಮಾಡೋದಕ್ಕೆ ಐದಂಕಿ ಸಂಬಳ! ಇದರಿಂದಾಗಿ ಸಮಾಜದ ವ್ಯವಸ್ಥೆಯೇ ಕೆಟ್ಟು ಹೋಗಿದೆ. ಸೂಕ್ತ ಸಂಬಳ ದೊರೆಯದು ಎನ್ನುವ ಕಾರಣಕ್ಕೇ ಯುವಕರು ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುತ್ತಿಲ್ಲ. ವೈದ್ಯರಾಗುವುದನ್ನೂ ಧಿಕ್ಕರಿಸಿ ಸಾಫ್ಟ್ ವೇರ್ ಕ್ಷೇತ್ರವನ್ನು ಆರಿಸಿಕೊಳ್ಳುತ್ತಿದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಭೂಮಿಯ ಬೆಲೆ ಗಗನಕ್ಕೇರಿ, ಕೃಷಿ ಮಾಡಬೇಕಿಂದಿದ್ದ ರೈತ, ದಿನವಿಡೀ ಹೀಗೆ ಸುಮ್ಮನೆ ದುಡಿಯುವುದಕ್ಕಿಂತ ಭೂಮಿ ಮಾರುವುದೇ ಲೇಸು ಎಂದು ಚಿಂತಿಸುತ್ತಾನೆ. ಇದು, ಜಾಗತೀಕರಣದ್ದೇ ವಿಷ ಬೀಜ.
ಇಷ್ಟಕ್ಕೆ ಮುಗಿಯಲಿಲ್ಲ. ಹಣದ ಅಮಲಿಗೆ ಬಿದ್ದ ಯುವಕ- ಯುವತಿಯರಿಗೆ ಸಂಬಂಧಗಳೇ ಬೇಡವಾಗುತ್ತವೆ. ಬೆಂಗಳೂರಿನ ಯಾವುದೇ ಕೌನ್ಸಿಲಿಂಗ್ ಸೆಂಟರಿನೆದುರು ನಿಂತರೂ ನಿಮ್ಮ ಕಣ್ಣಿಗೆ ಬೀಳುವುದು ವಿಚ್ಛೇದನದ ಬಯಕೆ ಹೊತ್ತು ನಿಂತಿರುವ ಯುವ ಜೋಡಿಗಳು! ಅವರ ಮನೆಯಲ್ಲಿ ಹಬ್ಬ ಹರಿದಿನಗಳಿಲ್ಲ. ಕುಟುಂಬದೊಡನೆ ಮುಕ್ತವಾಗಿ ಬೆರೆಯಲು ಸಮಯವಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ದುಡಿದವರು ಶನಿವಾರ ಭಾನುವಾರಗಳಂದು ಮೈಮರೆತು ಕಾಲಕಳೆಯಬೇಕೆಂದು ಕಂಪೆನಿಗಳು ಬಯಸುತ್ತವೆ. ಹೀಗಾಗಿ ಆ ಎರಡು ದಿನ ಪಾರ್ಟಿಗಳಾಗುತ್ತವೆ, ಪಿಕ್ನಿಕ್ ಗಳಾಗುತ್ತವೆ. ಆಗತಾನೇ ಇಂಜಿನಿಯರಿಂಗ್ ಮುಗಿಸಿ ಬಂದ ಯುವಕ ಯುವತಿಯರಂತೂ ಝಗಮಗಿಸುವ ದುನಿಯಾದಲ್ಲಿ ಕಳೆದೇಹೋಗುತ್ತಾರೆ. ಮಾಯೆಯ ಬಲೆಯ ಪ್ರಭಾವ ಅವರನ್ನು ಸಂಸ್ಕೃತಿಯಿಂದ ಬಲುದೂರ ಕರೆದೊಯ್ದುಬಿಡುತ್ತದೆ.
ಇದಕ್ಕೆ ವ್ಯತಿರಿಕ್ತವಾದುದು ನಮ್ಮ ರೈತನ ಬವಣೆ. ಹಸಿರುಕ್ರಾಂತಿಯ ಆರಂಭದಲ್ಲಿ ಹೆಚ್ಚುಹೆಚ್ಚು ಬೆಳೆ ಎನ್ನುತ್ತಾ ಅವನ ಕೈಗೆ ರಸ ಗೊಬ್ಬರ ಕೊಟ್ಟೆವು, ಬೀಜವನ್ನಿತ್ತು, ಔಷದಿಯನ್ನೂ ಕೊಟ್ಟೆವು. ಆತನೂ ಎಲ್ಲವನ್ನು ಬಳಸಿದ. ಮೊದಲ ಕೆಲ ವರ್ಷ ಬೆಳೆಯೂ ಚೆನ್ನಾಗಿ ಬಂತು. ಈಗ ಔಷದಿಯ ಪ್ರಭಾವದಿಂದ ಭೂಮಿಯೂ ಬಂಜರಾಗಿ ಬೆಳೆ ತೆಗೆಯುವುದೆ ಕಷ್ಟವೆಂದ ಮೇಲೆ ಒಬ್ಬೊಬ್ಬರಾಗಿ ಸಾವಿಗೆ ಶರಣಾಗುತ್ತಿದ್ದಾರೆ. ಪಡೆದ ಸಾಲ ತೀರಿಸಲಾಗದೇ ನೇಣುಕುಣಿಕೆಗೆ ಕೊರಳೊಡ್ಡುವ ಸ್ಥಿತಿ ರೈತನಿಗೇಕೆ ಬಂತು? ನಾವೆಂದಾದರೂ ಯೋಚಿಸಿದ್ದೇವೆಯೇ?
ಒಂದು ಕಾಲದಲ್ಲಿ ಜಗದ ಧಾನ್ಯದ ಕಣಜವಾಗಿದ್ದ ನಮ್ಮ ನಾಡಿನ ೪೦ ಕೋಟಿ ಜನರು ದಿವಸಕ್ಕೆ ಒಮ್ಮೆ ಒಂದೇ ಹೊತ್ತಿನ ಊಟ ಮಾಡಲು ಶಕ್ತರು ಎಂಬ ವಿಚಾರ ಅರಿವಿದೆಯೇ? ಈ ದೇಶದ ಮುಕ್ಕಾಲು ಪಾಲು ಜನರಿಗೆ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಮಗಿನ್ನೂ ಸಾಧ್ಯವಾಗಿಲ್ಲ! ಒಂದೆಡೆ ಜಾಗತೀಕರಣದ ಜಾಗಟೆ ಬಾರಿಸುತ್ತಾ, ಏರುತ್ತಿರುವ ಸೆನ್ಸೆಕ್ಸನ್ನು, ಏರುತ್ತಿರುವ ಬಿಲಿಯನೇರುಗಳ ಸಂಖ್ಯೆಯನ್ನು ತೋರಿಸುತ್ತಿದ್ದೇವೆ. ಮತ್ತೊಂದೆಡೆ ಆತ್ಮಹತ್ಯೆಗೆ ಶರಣಾಗುವ ರೈತ , ಹಸಿವಿನಿಂದ ಕಂಗಾಲಾಗಿ ತನ್ನ ಮಕ್ಕಳನ್ನೇ ಕೊಂದು ನೆಮ್ಮದಿಯ ಸಾವು ಕಾಣುವ ತಾಯಿ. ಇವೆಲ್ಲ ಜಾಗತೀಕರಣದ ವೈಪರೀತ್ಯಗಳು.
ಜಾಗತೀಕರಣ ಮೇಲ್ನೋಟಕ್ಕೆ ಲಾಭ ಕೊಡುವುದು ಮೇಲ್ಪದರಕ್ಕೆ ಮಾತ್ರ. ಮೇಲ್ಪದರ ಅಂದರೆ ಹಾಲಿನ ಕೆನೆಯಿದ್ದಂತೆ. ಈ ಕೆನೆ ನಿರ್ಮಾಣವಾಗೋದು ಹಾಲಿನ ಸತ್ತ್ವವನ್ನು ಹೀರಿಕೊಂಡು. ಜಾಗತೀಕರಣದ ಲಾಭ ಪಡೆಯುತ್ತಿರುವ ಮೇಲ್ಪದರದ ನಿರ್ಮಾಣವೂ ಅಷ್ಟೇ…. ಹಳ್ಳಿಗಳ ಸತ್ತ್ವ ಹೀರಿಯೇ ಕೆನೆಯಾಗಿವೆ. ಈಗ ತಾವು ಪಡೆದ ಸತ್ತ್ವವನ್ನು ಹಂತಹಂತವಾಗಿ ಮರಳಿಸಿ ಜಾಗತೀಕರಣದ ಲಾಭ ಎಲ್ಲರಿಗೂ ದೊರೆಯುವಂತೆ ಮಾಡಬೇಕಾದ್ದು ನಮ್ಮದೇ ಕರ್ತವ್ಯ.
ಅದಾಗಲೇ ಬೆಂಗಳೂರಿನ ಅನೇಕ ಸಾಫ್ಟ್ ವೇರ್ ಉದ್ಯೋಗಿಗಳು ತಾವೇ ಒಂದು ತಂಡ ಕಟ್ಟಿಕೊಂಡು ದೂರದ ಬಳ್ಳಾರಿಯಲ್ಲಿ ಶಾಲೆ ನಡೆಸುತ್ತಿದ್ದಾರೆ. ಸಾಹಿತ್ಯ ಸಂವೇದನೆಯನ್ನು ಜೀವಂತವಾಗಿರಿಸಿಕೊಳ್ಳುವ ಮೂಲಕ ಆ ನಿಟ್ಟಿನಲ್ಲಿಯೂ ಹೊಸಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಾಲೇಜುಗಳಿಗೆ ಭೇಟಿಕೊಟ್ಟು ಸಾಫ್ಟ್ ವೇರ್ ಉದ್ಯೋಗಿಯಲ್ಲ, ಕಂಪೆನಿಯ ಒಡೆಯರಾಗಿ, ಜಗತ್ತಿಗೆ ಶಕ್ತಿ ತೋರಿಸಿ ಎಂಬ ಪಾಠ ಮಾಡುತ್ತಿದ್ದಾರೆ.
ಗಾಂಧೀಜಿಯ ಹಿಂದ್ ಸ್ವರಾಜ್ ನ ಕಲ್ಪನೆಗಳು ಇಂದಿಗೂ ಸೂಕ್ತವಾಗುವುದು ಅದಕ್ಕೇ. ೧೯೪೭ರಲ್ಲಿ ನೆಹರೂಗೆ ಪತ್ರ ಬರೆದ ಗಾಂಧೀಜಿ ” ನಾವೆಲ್ಲರೂ ವಾಸಿಸ ಬೇಕಾಗಿರುವುದು ಅರಮನೆಗಳಲ್ಲಲ್ಲ, ಬಂಗಲೆಗಳಲ್ಲಲ್ಲ, ಜಗತ್ತಿನ ಉದ್ಧಾರಕ್ಕೋಸ್ಕರ ನಾವು ಗ್ರಾಮಗಳಲ್ಲಿ ವಾಸಿಸುವುದನ್ನು ಕಲಿಯಬೇಕಿದೆ” ಎಂದಿದ್ದರು. ಆಧುನಿಕ, ನಾಗರಿಕ ಎನ್ನುವ ಹೆಸರಿನಲ್ಲಿ ನಾವು ಹಳ್ಳಿಯಿಂದ ದೂರವಾಗುತ್ತಿದ್ದೇವೆ. ಈ ನಾಡಿನ ಮಣ್ಣಿನಿಂದಲೂ ದೂರವಾಗುತ್ತಿದ್ದೇವೆ. ಉತ್ತರ ಕರ್ನಾಟಕದ ಜನರ ಚಿತ್ರ ನೋಡಿದ ಬೆಂಗಳೂರಿನ ಯುವಕ ಯುವತಿಯರು ’ಅಬ್ಬಾ! ಮಂಗಳ ಗ್ರಹದಿಂದ ಬಂದವರಂತೆ ಕಾಣುತ್ತಾರೆ’ ಎಂದು ಹೇಳಿದರೆ ಖಂಡಿತ ಅಚ್ಚರಿ ಪಡಬೇಡಿ. ಪರಿಸ್ಥಿತಿ ಹಾಗೆಯೇ ಇದೆ. ನಾವೆಲ್ಲ ಮೆಕಾಲೆ ಹೇಳಿದ ಕರಿಯ ಚರ್ಮದ ಆಂಗ್ಲರಾಗಿಬಿಟ್ಟಿದ್ದೇವೆ. ನಮ್ಮ ಆಲೋಚನೆಗಳು, ಚಿಂತನೆಗಳು, ಉಡುಗೆ ತೊಡುಗೆಗಳು, ಎಲ್ಲವೂ ಪಾಶ್ಚಿಮಾತ್ಯೀಕರಣಕ್ಕೊಳಗಾಗಿವೆ. ಈ ಭ್ರಮೆಯಿಂದ ಹೊರ ಬರದ ಹೊರತು ಸಮರ್ಥ ಭಾರತದ ನಿರ್ಮಾಣ ಅಸಾಧ್ಯವೇ ಸರಿ. ಬಾರತದ ಅಂತಃ ಸತ್ತ್ವವನ್ನು, ಆತ್ಮ ಶಕ್ತಿಯನ್ನು ಅರಿಯುವ ಪ್ರಯತ್ನ ನಾವು ಮಾಡಬೇಕಿದೆ. ’ನಾವು ಕುರಿಗಳಲ್ಲ, ಹುಲಿಗಳು’ ಎಂದು ವಿವೇಕಾನಂದರು ಅವತ್ತು ಹೇಳಿದ್ದರಲ್ಲ, ಅದು ಅಂದಿನಷ್ಟೇ ಇಂದಿಗೂ ಪ್ರಸ್ತುತ. ಜಾಗತೀಕರಣದ ಆಕ್ಟೋಪಸ್ ನಮ್ಮನ್ನು ತನ್ನ ಮುಷ್ಟಿಯಲ್ಲಿ ಸಿಕ್ಕಿಸಿಕೊಳ್ಳುವ ಮುನ್ನ ನಾವು ಜ್ಞಾನದ ಹಸ್ತ ಚಾಚಿ ಜಗತ್ತನ್ನು ಶಾಂತಿ ನೆಮ್ಮದಿಯತ್ತ ಕೊಂಡೊಯ್ಯಬೇಕಿದೆ,
ಸಧ್ಯದ ಮಟ್ಟಿಗೆ ಅದೇ ದೊಡ್ಡ ಸವಾಲು.
Posted in ನಮ್ಮ ನಮ್ಮ ನಡುವೆ | 2 Comments »