ಮಗೂ, ಶ್ವೇತಕೇತೂ….
![]()
ಅಹಂಕಾರದಿಂದ ಬೀಗಿದ ಮಗ
ಅಪ್ಪನೆದುರು ನಿಂತ.
“ತಂದೆ, ನಾ ಎಲ್ಲ ಕಲಿತಿರುವೆ 

ನಿನಗಿಂತ ನಾ ತಿಳಿದವನೀಗ”
ಎಂದ.
ಅಪ್ಪ ನಕ್ಕ,
“ಓಹೋ! ಯಾವುದನರಿತು
ಮತ್ತೇನೂ ಕಲಿಯಬೇಕಿಲ್ಲವೋ ಅದನ್ನೂ….
ಅದನ್ನೂ ಅರಿತುಬಿಟ್ಟೆಯಾ!?”
ಮಗ ತಬ್ಬಿಬ್ಬು.
ಅಪ್ಪ ಕೇಳುತ್ತಲೇ ಹೋದ,
ಯಾರು ನೀನು?
ನೀನು ಯಾರು?
ದೇಹ ನೀನಾದರೆ, ನಿನ್ನ ಶವ ನೀನಾ?
ಮನವು ನೀನಾದರೆ, ಬುದ್ಧಿ ಯಾರದು?
ಬುದ್ಧಿ ನೀನಾದರೆ, ಚೈತನ್ಯವದೆಲ್ಲಿ?
ತಿಳಿಯಲಿರುವುದದೆಷ್ಟು?
ಇದನರಿತರೆ ಉಳಿಯುವುದು ಇನ್ನೆಷ್ಟು!?
ಮಗೂ ಶ್ವೇತಕೇತು,
ನಿನ್ನನರಿ.
ನಿನ್ನನರಿ, ನಿನ್ನನರಿ.
ಅದಕ್ಕಾಗಿ ‘ನಿನ್ನ’ ಮರಿ!
ವಾಲ್ ಮಾರ್ಟ್ ಮತ್ತು ಇತಿಹಾಸದ ಪಾಠ…
ಎಲ್ಲರಿಗೂ ನಮಸ್ತೇ.
ವಿಕ್ರಮ್ ಹತ್ವಾರ್ ಅವರು ತಮ್ಮ ಕಮೆಂಟಿನಲ್ಲಿ ವಾಲ್ ಮಾರ್ಟ್ ಬಗ್ಗೆ ಮಾತನಾಡಿದ್ದರು. ಹೀಗೆ ವಾಲ್ ಮಾರ್ಟ್ ವಿಷಯ ಬಂದಾಗ ನಾನು ಹೇಳಲೇಬೇಕಾದ ಒಂದಷ್ಟಿದೆ. ಅದನ್ನೀಗ ಇಲ್ಲಿ ನಿಮ್ಮೆದುರಿಡುವೆ.
ನಿಮ್ಮಲ್ಲಿ ಬಹುತೇಕರಿಗೆ ಶೂ ಕಂಪೆನಿಯ ಸೇಲ್ಸ್ ಮನ್ ಗಳಿಬ್ಬರು ಆಫ್ರಿಕಾಕ್ಕೆ ಹೋದ ಹಳೆಯ ಕಥೆ ಗೊತ್ತಿರಬಹುದು.
ಹಾಗೆ ಹೋದ ಇಬ್ಬರಲ್ಲಿ ಒಬ್ಬ ವಾಪಸು ಬಂದು ಮ್ಯಾನೇಜರನ ಬಳಿ ದೂರಿದ. “ಅಲ್ಲಿನ ಜನರಿಗೆ ಶೂ ಅಂದರೇನೆಂದೇ ಗೊತ್ತಿಲ್ಲ, ಅಲ್ಲಿ ವ್ಯಾಪಾರ ಕಷ್ಟ!” ಸ್ವಲ್ಪ ಹೊತ್ತಿನಲ್ಲೇ ಮತ್ತೊಬ್ಬ ಏದುಸಿರು ಬಿಡುತ್ತಾ ಬಂದು ಹೇಳಿದ, ” ನಮ್ಮ ಪುಣ್ಯ! ಅಲ್ಲಿ ಯಾವುದೇ ಶೂ ಕಂಪೆನಿ ಇಲ್ಲ. ನಾವೇ ಮೊದಲು. ಭರ್ಜರಿ ಸೇಲು!!” ಎಂದ…
ಅದು ಅಂತಾರಾಶ್ಟ್ರೀಯ ಮಾರುಕಟ್ಟೆಯ ನೀತಿ. ಜನ ವಸ್ತುಗಳನ್ನು ಬೇಕಾಬಿಟ್ಟಿ ಕೊಳ್ಳುವಂತೆ ಮಾಡಬೇಕು. ಹಾಗಾದಾಗಲೇ ದೊಡ್ಡ ಕಂಪೆನಿಗಳ ಮಾಲೀಕರಿಗೆ ಸಮಾಧಾನ. ಈ ಕೊಳ್ಳುಬಾಕತನ ನಮ್ಮಲ್ಲಿ ಅದೆಷ್ಟು ಹೆಚ್ಚಾಗಿದೆಯೆಂದರೆ, ಮೊದಮೊದಲು ಪ್ರತಿಷ್ಠೆಯ, ಶ್ರೀಮಂತಿಕೆಯ ಸಂಕೇತವೆನಿಸಿದ್ದ ವಸ್ತುಗಳೂ ಈಗ ದೈನಂದಿನ ಅಗತ್ಯದ ವಸ್ತುಗಳೆನಿಸಿ, ಅದೇ ನೆವದಲ್ಲಿ ಸಾಲ ಮಾದಿಯಾದರೂ ತರಲೇಬೇಕೆನ್ನುವ ಅನಿವಾರ್ಯತೆ ಸೃಷ್ಟಿಸಿಕೊಂಡು, ಮನೆ ತುಂಬಿಬಿದ್ದಿವೆ. ಈಗ ವಾಲ್ ಮಾರ್ಟ್ ಭಾರತಕ್ಕೆ ಕಾಲಿಡುತ್ತಿರುವುದು, ಈ ಬೇಕುಗಳಿಗೆಲ್ಲ ಹೊಸ ಆಯಾಮ ನೀಡಲೆಂದೇ.
ವಾಲ್ ಮಾರ್ಟ್ ಗಳೆಂದರೆ, ನಮ್ಮ ಸೂಪರ್ ಮಾರ್ಕೆಟ್, ಬಿಗ್ ಬಜಾರ್ ಗಳಿಗಿಂತ ಐವತ್ತು ಪಟ್ಟು, ನೂರು ಪಟ್ಟು ದೊಡ್ಡದಾಗಿರುವ ಅಂಗಡಿಗಳು- ಶಾಪಿಂಗ್ ಮಾಲ್ ಗಳು.
ನಿಮಗೆ ನೆನಪಿರಬಹುದು. ಈ ಹಿಂದೆ ಮೆಟ್ರೋ ಬೆಂಗಳೂರಿಗೆ ಬಂದಾಗ ಸಾವಿರಾರು ಸಣ್ಣ ಸಣ್ಣ ವ್ಯಪಾರಿಗಳು ಮುಷ್ಕರ ಹೂಡಿದ್ದರು. ಅವತ್ತು ಸರ್ಕಾರದ ಸೆರಗು ಹಿಡಿದ ಮೆಟ್ರೋ, ನಾವು ಹೋಲ್ ಸೇಲ್ ಮಾರಾಟಗಾರರೆಂದು ಕಣ್ಣೊರೆಸಿತ್ತು. ಅನಂತರ ಇಲ್ಲಿ ತಳವೂರಿದ ಮೇಲೆ ರೀಟೇಲ್ ದಂಧೆಗಿಳಿದು, ಕೆಲ ಕಾಲ ಅಕ್ಕಪಕ್ಕದ ವ್ಯಾಪಾರಿಗಳು ನೀರು ಕುಡಿಯುವಂತೆ ಮಾಡಿತ್ತು.
ಎಲ್ಲಾ ಸರಿ. ಆದರೆ ಆಮೇಲಿನ ಮಜಾ ನೋಡಿ… ವಾಲ್ ಮಾರ್ಟ್ ಭಾರತಕ್ಕೆ ಬರುವ ಸುದ್ದಿ ಕೇಳಿ ಮೆಟ್ರೋ ಅದುರಿ ಬಿತ್ತು. ಬರಲು ಬಿಡಬೇಡಿ ಎಂದು ಸರಕಾರಕ್ಕೆ ಒತ್ತಡ ತಂದಿತು. ವಾಲ್ ಮಾರ್ಟ್ ಭಾರತಕ್ಕೆ ಬಂದರೆ ನಾವು ಸತ್ತೇ ಹೋಗಿಬಿಡುತ್ತೇವೆಂದು ಆತಂಕ ಅದಕ್ಕೆ! ಅಂದ ಮೇಲೆ ಅದರ ವ್ಯಾಪಾರ ಪರಿಧಿ ಅದೆಷ್ಟು ದೊಡ್ಡದು ಊಹಿಸಿಕೊಳ್ಳಿ.
“ಅಗ್ಗದ ಬೆಲೆಗೆ ವಸ್ತುಗಳ ಮಾರಾಟ, ಹೆಚ್ಚು ಪ್ರಮಾಣದಲ್ಲಿ ಮಾರಾಟ” ಇದು ವಾಲ್ ಮಾರ್ಟ್ ವ್ಯಾಪಾರ ನೀತಿ. ಸಾವಿರಾರು ಎಕರೆಗಳಲ್ಲಿ ಹರಡಿಕೊಂಡ ಮಳಿಗೆಗಳಲ್ಲಿ ಸಿಗದೇ ಇರುವುದು ಏನೂ ಇಲ್ಲ ಎಂಬುದು ಅದರ ಘೋಷಣೆ. ವಾಲ್ ಮಾರ್ಟ್ ನಲ್ಲಿ ’ಎಲ್ಲವೂ’ ಸಿಗುವ ಬಗ್ಗೆ ಹೀಗೊಂದು ಕಥೆಯಿದೆ. ವಾಲ್ ಮಾರ್ಟನ್ನು ಪರೀಕ್ಷಿಸಲೆಂದೇ ಅಮೆರಿಕದ ಅಧ್ಯಕ್ಷರೊಬ್ಬರು ಅಲ್ಲಿಗೆ ಭೇಟಿಯಿತ್ತಿದ್ದರಂತೆ. ಹಾಗೆ ವಾಲ್ ಮಾರ್ಟ್ ಪಡಸಾಲೆಯಲ್ಲಿ ನಿಂತ ಅವರು ಕೇಳಿದ್ದು ಒಂದು ಆನೆಯನ್ನು! ಕೂಡಲೇ ಒಳಗಿದ್ದ ಸೇಲ್ಸ್ ಮನ್ “ಸರ್, ಬಿಳಿ ಆನೆ ಕೊಡಲೋ, ಕರಿಯದ್ದೋ?” ಎಂಡು ಮಂದಸ್ಮಿತನಾಗಿ ಕೇಳಿದನಂತೆ. ಆಗ ಅಧ್ಯಕ್ಷರು ಕಕ್ಕಾಬಿಕ್ಕಿ!
ಇದು ವದಂತಿಯೇ ಇರಬಹುದಾದರೂ ಮಾರ್ಟ್ ನ ಕಾರ್ಯವೈಖರಿ ಹಾಗೆಯೇ ಇದೆ.
ಸಾಲುಗಟ್ಟುವ ಸಮಸ್ಯೆಗಳು…
ವಾಲ್ ಮಾರ್ಟ್ ಭಾರತಕ್ಕೆ ಬರುವುದರಿಂದ ಈಗಲೇ ಅರ್ಧ ಮಲಗಿರುವ ನಮ್ಮ ಸಣ್ಣ ವಹಿವಾಟುದಾರರು ಪೂರ್ತಿ ನಿತ್ರಾಣರಾಗಿ ಅಂಗಾತ ಮಲಗೋದು ಖಚಿತ. ನಮ್ಮಲ್ಲಿ 12 x 12 ರಷ್ಟಿರುವ ಅಂಗಡಿಗಳು ಒಂದು ಕೋಟಿಯಷ್ಟಾದರೂ ಇವೆ. ದೊಡ್ಡ ದೊಡ್ಡ ಕಂಪೆನಿಗಳು ಮುಚ್ಚಿದಾಗ, ವಿ ಆರ್ ಎಸ್ ದೊರೆತಾಗ, ಎಕ್ಸಾಮ್ ಫೇಲ್ ಆದಾಗ, ಪೆನ್ಶನ್ ಹಣಾ ಬಂದಾಗಲೆಲ್ಲಾ ನಮ್ಮವರು ಒಂದು ಅಂಗಡಿ ತೆರೆದು ಕುಳಿತುಬಿಡುತ್ತಾರೆ. ಅದು ಸಲೀಸು. ಸಣ್ಣ ಪ್ರಮಾಣದ ಆದಾಯವೂ ಗ್ಯಾರೆಂಟಿ. ಆದರೆ ವಾಲ್ ಮಾರ್ಟ್ ಬಂದಮೇಲೆ ಅದೆಲ್ಲ ಬರೀ ಕನಸಾಗಿ ಉಳಿಯಲಿದೆ. ಬರಿ ಬನಶಂಕರಿಯ ಪುಟ್ಟ ಬಿಗ್ ಬಜಾರ್ ಅದೆಷ್ಟು ಚಿಕ್ಕ ಅಂಗಡಿಗಳನ್ನು ಕಮರಿ ಹಾಕಿದೆ ಗೊತ್ತೇ!?
ಸಧ್ಯದ ಮಟ್ಟಿಗೆ ವಾಲ್ ಮಾರ್ಟ್ ವ್ಯಾಪಾರೀ ಜಗತ್ತಿನಲ್ಲಿ ದೈತ್ಯ. ಅಮೆರಿಕದಿಂದ ಹೊರಗೆ ಸುಮಾರು ೩ ಲಕ್ಷ ಕಾರ್ಮಿಕರು ಅದರಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಗತ್ತಿನೆಲ್ಲೆಡೆ ವಾಲ್ ಮಾರ್ಟ್ 120ಕ್ಕೂ ಹೆಚ್ಚು ಅಂಗಡಿಗಳನ್ನು ಹೊಂದಿದೆ. ಅಷ್ಟೇ ಅಲ್ಲ, ಪ್ರತಿ 42 ಗಂಟೆಗೊಂದು ಹೊಸ ಅಂಗಡಿ ತೆರೆಯುವ ಛಾತಿ ತನಗಿದೆ ಎಂದೂ ಅದು ಹೇಳಿಕೊಂಡಿದೆ.
ಈ ಕಂಪೆನಿಯ ಕಾರ್ಯಶೈಲಿ ತುಂಬ ಸರಳ. ಆಯಾ ದೇಶದ ಅತಿ ದೊಡ್ಡ ರೀಟೇಲರ್ ಗಳನ್ನು ಗುರುತಿಸಿ ಅವರನ್ನೇ ಖರೀದಿಸಿಬಿಡೋದು. ಆ ಮೂಲಕ ತಮ್ಮ ವಿರುದ್ಧ ಸೆಣೆಸಬಲ್ಲ ಒಬ್ಬ ದೊಡ್ಡ ವೈರಿಯನ್ನು ಒಂದೇ ಹೊಡೆತಕ್ಕೆ ಮಲಗಿಸಿದಂತೆ ಆಯಿತು! ಅವರನ್ನು ಬಳಸಿಕೊಂಡೇ ವಾಲ್ ಮಾರ್ಟ್ ತನ್ನ ಹೆಸರು ಜನರಿಗೆ ಒಗ್ಗುವಂತೆ ಮಾಡುತ್ತದೆ. ನಂತರ ಇದ್ದೇ ಇದೆ. ಇತರೆಡೆಗಿಂತ ಕಡಿಮೆ ದರದಲ್ಲಿ ವಸ್ತುಗಳನ್ನು ಮಾರುತ್ತೇವೆ ಎಂದು ಜಾಹೀರಾತುಗಳನ್ನು ತಗುಲಿಹಾಕೋದು. ನಮಗೆ ಅನಿವಾರ್ಯವಲ್ಲದ ವಸ್ತುಗಳೂ ಕಡಿಮೆ ಬೆಲೆಗೆ ದೊರೆಯುತ್ತವೆ ಎಂದರೆ ಯಾರು ಬೇಡವೆನ್ನುತ್ತಾರೆ ಹೇಳಿ? ಸರಿ. ಇದರ ಪರಿಣಾಮ, ವಾಲ್ ಮಾರ್ಟ್ ಗೆ ಭರ್ಜರಿ ವ್ಯಾಪಾರ. ಆ ಪ್ರದೇಶದ ಆಸುಪಾಸು 40 ಮೈಲುಗಳವರೆಗೂ ಚಿಕ್ಕ ಅಂಗಡಿಗಳಿಗೆ ವ್ಯಾಪಾರ ಖೋತಾ! ಅದನ್ನೇ ನೆಚ್ಚಿ ಬದುಕು ನಡೆಸುವ ಸಂಸಾರಗಳು ಬೀದಿಪಾಲು.
ನಮ್ಮದು ಬಿಡಿ. ಮುಂದುವರೆದ, ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಸೇರುವ ಇಂಗ್ಲೆಂಡಿನಲ್ಲೂ ಹೀಗೇ ಆಗಿತ್ತು. ಪಟ್ಟಣದ ಹೊರವಲಯದಲ್ಲಿ ಒಂದು ವಾಲ್ ಮಾರ್ಟ್ ನ ದೊಡ್ಡ ಮಾಲ್ ಶುರುವಾಯ್ತು. ’ಟ್ರಾಫಿಕ್ ಕಿರಿಕಿರಿ ಬಿಡಿ, ಊರ ಹೊರಗೆ ಆರಾಮವಾಗಿ ಶಾಪಿಂಗ್ ಮಾಡಿ’ ಎಂಬ ಜಾಹೀರಾತಿಗೆ ಮರುಳಾದ ಜನ ಹಿಂಡುಹಿಂಡಾಗಿ ಲಗ್ಗೆ ಇಟ್ಟರು. ಅತ್ತ ಪಟ್ಟಣಾದೊಳಗಿನ ಅಂಗಡಿಗಳು ಖಾಲಿಖಾಲಿ. ಕೊನೆಗೆ ಕೈಲಾದವರು ಪೇಟೆಯೊಳಗಿನ ತಮ್ಮ ಅಂಗಡಿಗಳನ್ನು ಮುಚ್ಚಿ ತಾವೂ ಊರ ಹೊರಗೆ ಅಂಗಡಿಗಳನ್ನು ತೆರೆದು ಕುಳಿತರು! ತನಿಖೆ ನಡೆದು ವರದಿ ಸರ್ಕಾರದ ಮೇಜಿಗೆ ಹೋಯ್ತು. ಒಂದು ಸೂಪರ್ ಮಾರ್ಕೆಟ್ 276 ಜನ ಸ್ಥಳೀಯರ ಉದ್ಯೋಗ ಕಸಿಯುತ್ತೆ ಎಂಬ ಆಘಾತಕಾರಿ ಅಂಶ ಬಯಲಿಗೆ ಬಂತು. ಆದರೇನು? ಅಷ್ಟಾರಲ್ಲಾಗಲೇ ವಾಲ್ ಮಾರ್ಟ್ ಇಂಗ್ಲೆಂಡಿನ ಜನಜೀವನದ ಅಂಗವಾಗಿಬಿಟ್ಟಿತ್ತು.
ಮೆಕ್ಸಿಕೋದಲ್ಲಿ, ಅದರ ಶೇ 50ರಷ್ಟು ವ್ಯಾಪಾರ ವಾಲ್ ಮಾರ್ಟ್ ಹಿಡಿತದಲ್ಲಿದೆ. ಅಂದರೆ, ಆ ದೇಶದ ಅರ್ಧದಷ್ಟು ವ್ಯಾಪಾರಿಗಳು ಮಾರ್ಟ್ ನ ಅಡಿಯಾಳುಗಳು. ಆ ಮೂಲಕ ಇಡಿಯ ಸರ್ಕಾರವೇ ಅದಕ್ಕೆ ಅಧೀನ! 2004ರಲ್ಲಂತೂ ವಾಲ್ ಮಾರ್ಟ್, ಉತ್ಪಾದಕರು ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಬೇಕೆಂದು ತಾಕೀತು ಮಾಡಿದ್ದರಿಂದ ಬಡ ಉತ್ಪಾದಕರು ನೇಣಿಗೆರುವ ಪ್ರಸಂಗ ನಿರ್ಮಾಣವಾಗಿಹೋಗಿತ್ತು! ಇದೇ ರೀತಿಯ ಪರಿಸ್ಥಿತಿಯಿಂದಾಗಿ ಇಂಡೋನೇಷಿಯಾದ ಆರ್ಥಿಕತೆ ಗಂಭೀರ ಸ್ಥಿತಿ ತಲುಪಿ, ಸರ್ಕಾರವೇ ದಿವಾಳಿಯ ಅಂಚಿಗೆ ಬಂದು ನಿಂತಿತ್ತು!
ಇನ್ನು, ನೆರೆಯ ಚೀನಾಕ್ಕೆ ಮಾರ್ಟ್ ನುಗ್ಗಿದ್ದು 1996ರಲ್ಲಾದರೆ, ತನ್ನ ಮೊದಲ ದಾಳ ಎಸೆದಿದ್ದು 2003ರಲ್ಲಿ. ಅದಾದ ಎರಡೇ ವರ್ಶಗಳಾಲ್ಲಿ ಅದು ಬರೋಬ್ಬರಿ 22ಅಂಗಡಿಗಳನ್ನು ತೆರೆದು ಕುಳಿತಿತು. ಇಂದು ಅದು ತನ್ನ ಬೆರಳ ತುದಿಯಲ್ಲಿ ಆ ದೇಶವನ್ನು ಕುಣಿಸುತ್ತಿದೆ!
ಹೌದು. ವಾಲ್ ಮಾರ್ಟ್ ಭಾರತಕ್ಕೆ ಬರುವ ಪ್ರಕ್ರಿಯೆಗೆ ಚಾಲನೆ ದೊರಕಿ ವರ್ಷಗಳೇ ಕಳೆದಿವೆ. ಅದು ಆರಂಭಗೊಂಡ ದಿನಗಳಲ್ಲಿ ಒಂದಷ್ಟು ಸಂಘಟನೆಗಳು ಪ್ರತಿಭಟಿಸಿದ್ದೂ ನಿಜವೇ. ಆದರೆ ಈಗ ಅದನ್ನು ಮರೆಯುತ್ತ ಬಮ್ದು ಎಲ್ಲವೂ ತಣ್ಣಾಗಾಗುವ ಹೊತ್ತಿನಲ್ಲಿ ಸಮಯ ಸಾಧಿಸಿ, ಮೆಲ್ಲನೆ ಕಾಲಿಡಲಿದೆ ವಾಲ್ ಮಾರ್ಟ್. ಹಾಗೆ ಬರುವ ಮುನ್ನ ಸಾಕಷ್ಟು ಅಧ್ಯಯನ ನಡೆಸಿರುವ ಅದು ನಮ್ಮ ವೀಕ್ ನೆಸ್ಸುಗಳನ್ನು ಚೆನ್ನಾಗಿ ಅಭ್ಯಸಿಸಿಯೇ ಬರುತ್ತಿದೆ. ಅದಾ ಹೊರಗಿನವರಿಗೆ ಮಣೆ ಹಾಕುವ ನಮ್ಮ ಸರ್ಕಾರಗಳು ಅದಕ್ಕೆ ತಲೆಬಾಗಿ ಅದರ ಅಡಿಯಾಳಾಗುವ ದಿನವೇನೂ ದೂರವಿಲ್ಲ.
ಅಂದ ಹಾಗೆ… ಅವತ್ತೂ ಒಂದು ಈಸ್ಟ್ ಇಂಡಿಯಾ ಕಂಪೆನಿ ಬಂದಿತ್ತು, ವ್ಯಾಪಾರಕ್ಕೇಂತ. ಆಮೇಲೆ ಗೊತ್ತೇ ಆಗದ ಹಾಗೆ ನಾವು ನೂರಾರು ವರ್ಷ ಕಾಲ ಗುಲಾಮರಾಗಿಹೋದೆವು. ವಾಲ್ ಮಾರ್ಟ್ ಅದರದ್ದೇ ಸಂತಾನ. ವ್ಯಾಪಾರದ ನೆಪದಲ್ಲಿ ಅದು ನಮ್ಮನ್ನ ಕೊಳ್ಳುಬಾಕರನ್ನಾಗಿಸುತ್ತೆ. ನಾವೂ ಶಾಪಿಂಗಿಗೆ ಹೋಗೋದನ್ನ ಫ್ಯಾಶನ್ ಅಂದುಕೊಳ್ತೇವೆ. ಬೇಡದ್ದನ್ನು ಕೊಳ್ತೇವೆ. ಅದರ ಲಾಭ ಯಾರಿಗೋ ಸೇರಿಹೋಗತ್ತೆ! ಮತ್ತೆ ನಮ್ಮ ಜನರು ಬೀದಿ ಪಾಲಾಗುತ್ತಾರೆ. ನಾವು ಮೆಲ್ಲಗೆ ಮತ್ತೆ ದಾಸ್ಯದ ತೆಕ್ಕೆಗೆ ಸೇರಿಕೊಂಡುಬಿಡುತ್ತೇವೆ.
ಹಾಗಾದರೆ, ಇತಿಹಾಸ ನಮಗೇನೂ ಪಾಠ ಕಲಿಸಲೇ ಇಲ್ವೇ?
ರಾಮಕೃಷ್ಣಾಶ್ರಮದಲ್ಲಿ ಪುಸ್ತಕ (ಪ್ರ)ದರ್ಶನ
ಸ್ವಾಮಿ ವಿವೇಕಾನಂದ! ಅದು ಬರಿಯ ಹೆಸರಲ್ಲ. ಅದೊಂದು ಶಕ್ತಿ. ಅಸೀಮ ಸ್ಫೂರ್ತಿ. ಅವರನ್ನು ಆಲಿಸುತ್ತ, ಅವರು ನಡೆದು ತೋರಿದ ದಾರಿಯಲ್ಲಿ ಹೆಜ್ಜೆಗಳನ್ನಿಡುತ್ತ ನಡೆದು ಬದುಕಿನ ಉನ್ನತ ಮಜಲುಗಳಿಗೇರಿದ ಯುವಕರ ಸಂಖ್ಯೆ ಅದೆಷ್ಟೋ… ಅದು ರಾಷ್ಟ್ರ ಪ್ರೇಮದ ಮಾತಾಗಿರಲಿ, ಸಮಾಜ ಸೇವಾ ಕ್ಷೇತ್ರವಿರಲಿ, ಅಥವಾ ಸಾಹಿತ್ಯ ಕ್ಷೇತ್ರವೇ ಆಗಿರಲಿ… ಎಲ್ಲೆಲ್ಲೂ ಹೊಸ ಹುಮ್ಮಸ್ಸಿನ ಅಲೆ ಎಬ್ಬಿಸುತ್ತ ಉತ್ಕೃಷ್ಟತೆಯ ಪತಾಕೆ ಹಾರಿಸುತ್ತ ಮೆರೆಯುವ ಏಕೈಕ ಹೆಸರು, ಸ್ವಾಮಿ ವಿವೇಕಾನಂದ.
ನಾವು ಮಾಡುವ ಯಾವುದೇ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ವಿವೇಕಾನಂದರ ಮಾತುಗಳು ಸಮರ್ಥ ಮಾರ್ಗದರ್ಶನ ನೀಡಬಲ್ಲವು. ಅವರಲ್ಲಿ ನಿರಾಶಾವಾದದ ಋಣಾತ್ಮಕ ಅಂಶವೇ ಇಲ್ಲ. ಎಂಥ ಪರಿಸ್ಥಿತಿಯಲ್ಲಿಯೂ ಸ್ವಾಮೀಜಿಯವರ ಮಾತು ಕೇಳಿದವನು ಚೈತನ್ಯದ ಚಿಲುಮೆಯಾಗಿಬಿಡುತ್ತಾನೆ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಸೋದರಿ ನಿವೇದಿತಾ, ನೇತಾಜಿ, ಅರವಿಂದರು, ಭಾಗಾ ಜತೀನ್, ಹೀಗೆ ಸಾಲು ಸಾಲು ಕ್ರಾಂತಿವೀರರು ವಿವೇಕಾನಂದರ ಪ್ರಖರ ತೇಜಸ್ಸಿನ ಸುಳಿಮಿಂಚಿಗೆ ಸಿಲುಕಿ ತಾವೂ ಧೃವತಾರೆಗಳಾದರು. ನಮ್ಮ ಕನ್ನಡದ ಕುವೆಂಪು ಅಂಥವರು ಸ್ವಾಮೀಜಿ ಚಿಂತನೆಗಳಿಂದ ಬಹಳ ಪ್ರಭಾವಿತರಾಗಿದ್ದರು. ಅವರ ಶಿಷ್ಯರಾದ ಜಿ. ಎಸ್. ಶಿವರುದ್ರಪ್ಪನವರೂ ಕೂಡ ವಿವೇಕಾನಂದರ ಮಾತುಗಳಿಂದ ಪ್ರಭಾವಿತರಾದವರೇ. ಇವರು ನಮ್ಮ ಕಣ್ಣಿಗೆ ಕಾಣುವ ಕನ್ನಡಿಗರಷ್ಟೇ. ಇನ್ನು ಇತರ ರಾಜ್ಯಗಳಲ್ಲಿ ಹೀಗೆ ಸ್ವಾಮೀಜಿ ವಿಚಾರ ಧಾರೆಗಳಿಂದ ಪ್ರಭಾವಿತರಾದ ಸಾಹಿತಿಗಳು ಅದೆಷ್ಟಿರುವರೋ? 
ಸಮಾಜ ಸೇವೆಯ ಕ್ಷೇತ್ರಕ್ಕೆ ಬಂದರೆ, ಸೋಲಿಗರ ನಡುವೆ ಕೆಲಸ ಮಾಡುವ, ಅವರಲ್ಲಿ ಬದುಕಿನ ವಿಶ್ವಾಸ ತುಂಬುತ್ತಿರುವ ಸುದರ್ಶನರು, ಹೆಗ್ಗಡೆದೇವನ ಕೋಟೆಯ ಬಾಲಸುಬ್ರಹ್ಮಣ್ಯರು, ಇವರೆಲ್ಲರ ಶಕ್ತಿಸ್ರೋತ ಸ್ವಾಮಿ ವಿವೇಕಾನಂದರೇ! ಇವರೂ ಕೂಡ ನಮ್ಮ ಸ್ಮರಣೆಗೆ ಥಟ್ಟನೆ ಬರುವ ವ್ಯಕ್ತಿಗಳು. ಇವರಂತೆ ಎಲೆ ಮರೆಯ ಕಾಯಿಗಳಾಗಿ ಸಮಾಜ ಸೇವೆಗೆ ಸ್ವಾಮಿ ವಿವೇಕಾನಂದರ ಹೆಸರಲ್ಲಿ ಕಟಿ ಬದ್ಧರಾಗಿರುವವರು ಬಹಳ ಷ್ಟಿದ್ದಾರೆ. ಇಂದಿನ ಯುವಶಕ್ತಿ ದಾರಿತಪ್ಪಿದೆ ಎಂದೆಲ್ಲ ಹೇಳು ತ್ತೇವೆ, ಹೀಗೆ ಮಾರ್ಗಬಿಟ್ಟ ಯುವಕರನ್ನು ಮತ್ತೆ ಸರಿದಾರಿಗೆ ತರಲು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚುವುದು ಬಿಟ್ಟು ಬೇರೆ ಮಾರ್ಗವಿಲ್ಲ.
ದೇಶಾದ್ಯಂತ ಇರುವ ರಾಮಕೃಷ್ಣಾಶ್ರಮಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಅವುಗಳಲ್ಲಿ ನಮ್ಮ ಬೆಂಗಳೂರಿನ ಆಶ್ರಮವೂ ಮುಖ್ಯವಾದುದು. “ಸುಮ್ಮನೆ ನೋಡಲೆಂದು” ಬಂದ ಅದೆಷ್ಟೋ ಯುವಕರು ಇಲ್ಲಿನ ಪ್ರಶಾಂತ ವಾತಾವರಣದ ಪ್ರಭಾವಲಯಕ್ಕೆ ಒಳಗಾಗಿ ಆಂತರಿಕ ಪರಿವರ್ತನೆ ಪಡೆದು ಹೊರನಡೆದಿದ್ದಿದೆ. ಆಶ್ರಮ ನಡೆಸುತ್ತಿರುವ ವಿದ್ಯಾರ್ಥಿಗಳ ಹಾಸ್ಟೆಲ್- ವಿದ್ಯಾರ್ಥಿ ಮಂದಿರವಂತೂ ಸಾವಿರ ಸಾವಿರ ಸಂಖ್ಯೆಯ ಯುವಕರಿಗೆ ಆದರ್ಶದ ಪಥ ರೂಪಿಸಿಕೊಟ್ಟಿದೆ, ಬದುಕಿಗೊಂದು ಧ್ಯೇಯ ಕಲ್ಪಿಸಿಕೊಟ್ಟಿದೆ. ಇದೆಲ್ಲ, ಆಶ್ರಮದ ಪೂಜಾವೇದಿಯಲ್ಲಿ ಅಪಾರ ಕರುಣೆ ಹರಿಸುತ್ತ, ತಣ್ಣಗೆ ನಗುತ್ತ ಕುಳಿತಿರುವ ಪರಮಹಂಸರ ಕರುಣೆ. ಬಂದ ಮಕ್ಕಳಿಗೆಲ್ಲ ಇಲ್ಲಿ ತಾಯಿ ಮಡಿಲಿನಲ್ಲಿರುವಂಥ ಸುರಕ್ಷತೆಯ ಭಾವ. ಜನನಿ ಶಾರದಾಮಾತೆ ಹರಸಿದ ಸ್ಥಳವಲ್ಲವೇ ಇದು? ಇಲ್ಲಿ ಈ ಬಗೆಯ ಹತ್ತು ಹಲವು ವೈಶಿಷ್ಟ್ಯಗಳು.
ಶತಮಾನದ ಇತಿಹಾಸ ಕಂಡ ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮ ಸರಿಯುತ್ತಿರುವ ಕಾಲಕ್ಕೆ ಅಗತ್ಯವಿರುವಂತಹ ಕಾರ್ಯಕ್ರಮಗಳನ್ನು ರೂಪಿಸುತ್ತ, ಯುವ ಶಕ್ತಿ ಧನಾತ್ಮಕ ದಿಕ್ಕಿನಲ್ಲಿ ಹರಿಯುವಂತೆ ಮಾರ್ಗದರ್ಶನ ಮಾಡುತ್ತ, ಸ್ವಾಮೀಜಿಯವರ ಆಶಯವನ್ನು ಸಾಕಾರಗೊಳಿಸುತ್ತಿದೆ. ಭವ್ಯ ಭಾರತದ ನಿರ್ಮಾಣ ಕೇವಲ ಕನಸಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಇಂದಿನ ಪೀಳಿಗೆ ಬೌದ್ಧಿಕ ಚರ್ಚೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂಥದ್ದು.
ಬಸವನಗುಡಿಯಲ್ಲಿರುವ ರಾಮಕೃಷ್ಣಾಶ್ರಮ ಕಳೆದ ನೂರು ವರ್ಷದಿಂದ ಎಲ್ಲ ಬಗೆಯ ಜನರನ್ನು ಒಟ್ಟುಗೂಡಿಸುತ್ತ ಇಂಥದೊಂದು ಅವಕಾಶ ನೀಡುತ್ತ ಬಂದಿದೆ. ಮಾಡುತ್ತ ಬಂದಿದೆ. ರಾಮಕೃಷ್ಣ ಪರಮಹಂಸರು, ಶಾರದಾಮಾತೆಯರ ರೂಪದಲ್ಲಿ ಮುಮುಕ್ಷುಗಳಿಗೆ ಆಧ್ಯಾತ್ಮಿಕ ಸುಧೆ ಹರಿಸುತ್ತ, ಯುವಕರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತ ಬಲವಾಗಿ ನಿಂತಿದೆ. ಭಕ್ತ ಸಮ್ಮೇಳನಗಳು, ಯುವ ಸಮ್ಮೇಳನಗಳು ಈ ನಿಟ್ಟಿನಲ್ಲಿ ಸಾರ್ಥಕವಾದವುಗಳಂಥವು. ಪ್ರತಿ ವರ್ಷ ರಾಮಕೃಷ್ಣಾಶ್ರಮದಲ್ಲಿ ನಡೆಯುವ ರಾಮಕೃಷ್ಣ, ಶಾರದಾ ಮಾತೆ, ವಿವೇಕಾನಂದರ ಜಯಂತಿಯಂತೂ ಆಸ್ತಿಕರ, ಅಧ್ಯಯನಶೀಲರ ಗಮನ ಸೆಳೆಯುವಂಥವು. ಈ ಸಂಧರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನಗಳು, ಭಾವುಕರ ಮನಸೂರೆಗೊಂಡರೆ, ಆ ಸಂದರ್ಭದಲ್ಲಿನ ಪುಸ್ತಕಪ್ರದರ್ಶನ- ಮಾರಾಟ ವ್ಯವಸ್ಥೆ ಓದುಗರನ್ನ ಆಕರ್ಷಿಸುತ್ತದೆ. ಹೀಗೆ ಇಲ್ಲಿ ಹೃದಯಕ್ಕೂ ಆಹಾರ, ಬುದ್ಧಿಗೂ ಆಹಾರ. ರಾಮ ಕೃಷ್ಣರ, ಶ್ರೀಮಾತೆಯವರ, ವಿವೇಕಾನಂದರ ಮತ್ತು ರಾಮಕೃಷ್ಣ ಶಿಷ್ಯ ಪರಂಪರೆಯ ಅನೇಕಾನೇಕ ಸಂತರ ಜೀವನ ಚರಿತ್ರೆಗಳು, ಸ್ತೋತ್ರ ಮಾಲಿಕೆಗಳು, ಆಧ್ಯಾತ್ಮಿಕ ಜೀವನದಲ್ಲಿ ದಾರಿದೀವಿಗೆಗಳಾಗಬಲ್ಲ ಅದೆಷ್ಟೋ ಪುಸ್ತಕಗಳು ಈ ಪ್ರದರ್ಶನದಲ್ಲಿ ಸುಲಭ ಬೆಲೆಗೆ ದಕ್ಕುತ್ತವೆ.
ಅಂದಹಾಗೆ, ಜನವರಿ ೧ರಿಂದ ೧೫ರವರೆಗೆ ರಾಮಕೃಷ್ಣಾಶ್ರಮದಲ್ಲಿ ಪುಸ್ತಕ ಪ್ರದರ್ಶನವೇರ್ಪಡಿಸಲಾಗಿದೆ. ಈ ಸಂದರ್ಭವನ್ನು ಯಥೋಚಿತವಾಗಿಬಳಸಿಕೊಂಡು ಅದರ ಲಾಭ ಪಡೆಯಲು, ಆ ಮೂಲಕ ನಮ್ಮ ಅರಿವಿನ ಹಸಿವನ್ನು ನೀಗಿಕೊಳ್ಳಲು ಇದೊಂದು ಸುವರ್ಣಾವಕಾಶ.
ಅನುಭಾವ ಬಿಂದುಗಳು…
- 1 -
ಕಾಣದ ನಿನ್ನ
ಅರಸಿ ಅರಸಿಯೇ ಬೇಸತ್ತೆ.
ಊಹೂಂ…!
ಇಲ್ಲಿಯೂ ದಕ್ಕಲಿಲ್ಲ
ಅಲ್ಲೂ ದಕ್ಕಲಿಲ್ಲ.
ಮಾಡಿಟ್ಟ ಅಡುಗೆಯ ಬಿಟ್ಟು
ಭಿಕ್ಷಾಟನೆಗೆ
ಹೋಗಿದ್ದೇ ತಪ್ಪಾಯಿತೇನೋ?
- 2 -
ಮಾತಿಗೆ ನಿಲುಕದವನು
ಎನ್ನುತ್ತಲೇ
ಮಾತಾಡುತ್ತಾರೆ
ನಿನ್ನ ಬಗ್ಗೆ
ರೇಜಿಗೆ ಹುಟ್ಟುವುಷ್ಟು
ನಿನ್ನ ಕಂಡ ಮೇಲೆ
ಮಾತಾಡಲು
ಅವರಿಗೆ ಅದೆಲ್ಲಿ
ಪುರುಸೊತ್ತು!?
- 3 -
ಹೂವು ಚೆಂದ, ಸುಂದರ
ಅನ್ನುತ್ತಲೇ ಉಳಿದೆವು,
ದುಂಬಿ ಹೀರಿತು ಮಕರಂದ.
ನಿನ್ನ ಬಗ್ಗೆ
ಹೇಳಿದ್ದೇ ಬಂತು,
ಅವ ಸವಿದ ನಿನ್ನಂದ!
- 4 -
ಬದುಕಿಗಿಂತ ಸಾವೇ ಮೇಲು
ಅನ್ನುತ್ತಾರೆ ಕೆಲವರು.
ಬದುಕಿನ ಸವಿ ಹೀರಲಾಗದೆ,
ಸಾವಿನ ಸಾಹಸ ಮಾಡಲಾಗದೆ
ನಿತ್ಯ ಸಾಯುತ್ತಾರೆ,
ಬದುಕಿದ್ದೂ ಸತ್ತಂತಿರುತ್ತಾರೆ.
- 5 -
ಹುಟ್ಟಿದೊಡನೆ ಅಮ್ಮನ್ನ ಕಳಕೊಂಡೆ
ಅವಳು ಹಾಲೂಡಿಸಿದ್ದರೆ,
ಈ ಅಲ್ಕೋಹಾಲು ನಾನೇಕೆ ಕುಡಿಯುತ್ತಿದ್ದೆ?
ಹಾಗಂತ ಹಲುಬುತ್ತಲೇ ಇದ್ದೆ.
ನೆನ್ನೆಯಷ್ಟೇ ಸಮಾಧಾನವಾಯಿತು
ಬಾರಿನ ನನ್ನ ಟೇಬಲ್ಲ ಪಕ್ಕದಲ್ಲಿ
ಪಾರ್ಟಿ ನಡೆದಿತ್ತು
ಅಧಿಕಾರಿಗಳು, ರಾಜಕಾರಣಿಗಳು
ಜಾಮಿನ ಮೇಲೆ ಜಾಮಿಳಿಸುತ್ತಿದ್ದರು,
‘ಹಾಲೂಡಿಸಿದ ತಾಯಿ’ಗೆ ವಿಷ ಕೊಟ್ಟು!
2 comments